ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಗೆ ಒಳಪಡುವ ಬೆಂಗಳೂರು ಪೂರ್ವ ನಗರ ಪಾಲಿಕೆಯ 2026ರ ಸಾರ್ವತ್ರಿಕ ಚುನಾವಣೆಗೆ ಸಿದ್ಧತೆಗಳು ಚುರುಕುಗೊಂಡಿವೆ. ಈ ಸಂಬಂಧ ಪರಿಷ್ಕೃತ ಕರಡು ಮತದಾರರ ಪಟ್ಟಿಯನ್ನು ಮುಂಬರುವ ಮಾರ್ಚ್ 9ರಂದು ಪ್ರಕಟಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.
ಈಗಾಗಲೇ ಜನವರಿ 19ರಂದು ಪ್ರಾಥಮಿಕ ಕರಡು ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಸದ್ಯ ಇದರ ಪರಿಷ್ಕರಣಾ ಕಾರ್ಯ ಪ್ರಗತಿಯಲ್ಲಿದ್ದು, ಅಂತಿಮ ಹಂತದ ಪರಿಷ್ಕೃತ ಪಟ್ಟಿಯು ಮಾರ್ಚ್ 9ರಂದು ಸಾರ್ವಜನಿಕರ ಅವಗಾಹನೆಗೆ ಲಭ್ಯವಾಗಲಿದೆ.
ಆಕ್ಷೇಪಣೆ ಸಲ್ಲಿಸಲು ಅವಕಾಶ:
ಪ್ರಕಟಿತ ಪಟ್ಟಿಯಲ್ಲಿ ಲೋಪದೋಷಗಳಿದ್ದಲ್ಲಿ ಸಾರ್ವಜನಿಕರು ಮಾರ್ಚ್ 10ರಿಂದ ಮಾರ್ಚ್ 16ರ ಅವಧಿಯಲ್ಲಿ ಅಹವಾಲು ಅಥವಾ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ವಿಶೇಷವಾಗಿ ಒಂದೇ ಕುಟುಂಬದ ಸದಸ್ಯರ ಹೆಸರು ಬೇರೆ ಬೇರೆ ವಾರ್ಡ್‌ಗಳಿಗೆ ಹಂಚಿಹೋಗಿದ್ದರೆ, ವಿಳಾಸ ಬದಲಾವಣೆಯಾಗಿದ್ದರೆ ಅಥವಾ ಭೌಗೋಳಿಕವಾಗಿ ವಾಸವಿರುವ ವಾರ್ಡ್ ಬಿಟ್ಟು ಬೇರೆ ಮತಗಟ್ಟೆಯಲ್ಲಿ ಹೆಸರು ಸೇರ್ಪಡೆಯಾಗಿದ್ದರೆ ತಿದ್ದುಪಡಿ ಕೋರಿ ಅರ್ಜಿ ಸಲ್ಲಿಸಬಹುದಾಗಿದೆ.
ಸಂಪರ್ಕಿಸಬೇಕಾದ ಅಧಿಕಾರಿಗಳು:
ಮಹದೇವಪುರ ಮತ್ತು ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಒಟ್ಟು 50 ಹೊಸ ವಾರ್ಡ್‌ಗಳ ಮತದಾರರು ಆಯಾ ವಲಯದ ನೋಂದಣಾಧಿಕಾರಿಗಳನ್ನು ಸಂಪರ್ಕಿಸಬಹುದು.
ವಾರ್ಡ್ 01 ರಿಂದ 27 (ಕೆ.ಆರ್.ಪುರ ವ್ಯಾಪ್ತಿ): ಮತದಾರರ ನೋಂದಣಾಧಿಕಾರಿ ಬಸವರಾಜ್ ಎಸ್ ಮಗಿ (ಮೊ: 9480683002) ಅಥವಾ ಕೆ.ಆರ್.ಪುರ ಜಿಬಿಎ ಕಚೇರಿಯನ್ನು ಸಂಪರ್ಕಿಸಬಹುದು.
ವಾರ್ಡ್ 28 ರಿಂದ 50 (ಮಹದೇವಪುರ ವ್ಯಾಪ್ತಿ): ಮತದಾರರ ನೋಂದಣಾಧಿಕಾರಿ ಆನಂದ್ ಕೆ.ಎಸ್ (ಮೊ: 9945005677) ಅಥವಾ ಮಹದೇವಪುರ ವಲಯ ಕಚೇರಿಗೆ ಅಹವಾಲು ಸಲ್ಲಿಸಬಹುದು.
ಅರ್ಹ ಮತದಾರರು ಈ ಕಾಲಮಿತಿಯೊಳಗೆ ಪಟ್ಟಿಯನ್ನು ಪರಿಶೀಲಿಸಿ, ಮತದಾನದ ಹಕ್ಕನ್ನು ಖಚಿತಪಡಿಸಿಕೊಳ್ಳಬೇಕೆಂದು ಪಾಲಿಕೆ ಪ್ರಕಟಣೆಯಲ್ಲಿ ಕೋರಲಾಗಿದೆ.

