Fri. Mar 6th, 2026

ಬೆಂಗಳೂರು ಕಸ ವಿವಾದ: ಬಿಜೆಪಿ ಶಾಸಕರಿಗೆ ‘ಎಸ್‌ಮಾ’ ಎಚ್ಚರಿಕೆ ನೀಡಿದ ಡಿಸಿಎಂ

Share this with Friends

ಬೆಂಗಳೂರು: “ನಗರದ ಕಸ ವಿಲೇವಾರಿಗೆ ಅಡ್ಡಿಪಡಿಸುವವರು ಶಾಸಕರೇ ಇರಲಿ ಅಥವಾ ಮತ್ಯಾರೇ ಆಗಿರಲಿ, ಅಂತಹವರ ವಿರುದ್ಧ ಯಾವುದೇ ಕರುಣೆ ತೋರದೆ ‘ಎಸ್‌ಮಾ’ (ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ) ಅಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಸ ವಿಲೇವಾರಿ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿ ಶಾಸಕರ ವಿರುದ್ಧ ಕೆಂಡಾಮಂಡಲವಾದರು.”ಗೌರವದಿಂದ ಇದ್ದರೆ ಸರಿ. ಇಲ್ಲದಿದ್ದರೆ ಪ್ರತಿಭಟನೆ ನಡೆಸುವ ಶಾಸಕರ ಮನೆ ಮುಂದೆ ಅಥವಾ ಬಿಜೆಪಿ ಕಚೇರಿ ಎದುರು ಲೋಡ್‌ಗಟ್ಟಲೆ ಕಸವನ್ನು ತಂದು ಸುರಿಯಬೇಕಾಗುತ್ತದೆ. ಮಹದೇವಪುರ ಮತ್ತು ದೊಡ್ಡಬಳ್ಳಾಪುರ ಶಾಸಕರು ಕಸದ ಲಾರಿಗಳನ್ನು ತಡೆದು ಬ್ಲಾಕ್‌ಮೇಲ್ ತಂತ್ರ ಅನುಸರಿಸುತ್ತಿದ್ದಾರೆ. ಕಸ ಹಾಕಲು ಬಿಡದಿದ್ದರೆ ನಗರದ ತ್ಯಾಜ್ಯ ಎಲ್ಲಿಗೆ ಹೋಗಬೇಕು? ಆರ್. ಅಶೋಕ್ ಅಥವಾ ವಿಜಯೇಂದ್ರ ಅವರ ಮನೆಗೆ ಕಳುಹಿಸಬೇಕೇ?” ಎಂದು ಪ್ರಶ್ನಿಸಿದರು.

ಅನುದಾನಕ್ಕಾಗಿ ಬ್ಲಾಕ್‌ಮೇಲ್ ರಾಜಕಾರಣ:

ಕ್ಷೇತ್ರಗಳಿಗೆ ಅನುದಾನ ಬೇಕು ಎಂಬ ಕಾರಣಕ್ಕೆ ಕಸದ ವಿಲೇವಾರಿಯನ್ನು ತಡೆಯುವುದು ಸರಿಯಲ್ಲ. “ಮಂಗಳವಾರ ಅರವಿಂದ ಲಿಂಬಾವಳಿ ಹಾಗೂ ಇಂದು ದೊಡ್ಡಬಳ್ಳಾಪುರ ಶಾಸಕರು ಅಡ್ಡಿಪಡಿಸಿದ್ದಾರೆ. ಈ ಹಿಂದಿನಿಂದಲೂ ಇಲ್ಲಿಯೇ ಕಸ ಹಾಕಲಾಗುತ್ತಿದೆ, ಈಗ ಹೊಸದೇನಲ್ಲ. ಕಸದ ಲಾರಿಯಿಂದ ಅಪಘಾತವಾಗಿದ್ದರೆ ಅದಕ್ಕೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಿ. ಅದನ್ನು ಬಿಟ್ಟು ಇಡೀ ನಗರದ ವ್ಯವಸ್ಥೆಯನ್ನು ಹಾಳು ಮಾಡುವುದು ಸರಿಯಲ್ಲ,” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಪರ್ಯಾಯ ವ್ಯವಸ್ಥೆ ಸಿದ್ಧ:

ನಗರದ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಈಗಾಗಲೇ ಸರ್ಕಾರ ಎರಡು ಹೊಸ ಜಾಗಗಳನ್ನು ಖರೀದಿ ಮಾಡಿದೆ. ಕಾನೂನು ಪ್ರಕಾರ ಟೆಂಡರ್ ಪ್ರಕ್ರಿಯೆಗಳೂ ನಡೆಯುತ್ತಿವೆ. ಎಸ್‌ಟಿ ಸೋಮಶೇಖರ್, ಭೈರತಿ ಶಿವಣ್ಣ ಮತ್ತು ಕೃಷ್ಣಬೈರೇಗೌಡ ಅವರ ಕ್ಷೇತ್ರಗಳಲ್ಲೂ ಕಸ ವಿಲೇವಾರಿ ನಡೆಯುತ್ತಿದೆ, ಅಲ್ಲಿ ಇಲ್ಲದ ಸಮಸ್ಯೆ ಇಲ್ಲಿ ಏಕೆ? ಎಂದು ಡಿಕೆಶಿ ಪ್ರಶ್ನಿಸಿದರು.

ಅನುದಾನ ಅಲಭ್ಯತೆಗೆ ಬಿಜೆಪಿಯೇ ಕಾರಣ: 

ರಾಜ್ಯದಲ್ಲಿ ಕಾಮಗಾರಿಗಳ ಬಾಕಿ ಬಿಲ್ ಪಾವತಿ ಮತ್ತು ಅನುದಾನದ ಕೊರತೆಗೆ ಹಿಂದಿನ ಬಿಜೆಪಿ ಸರ್ಕಾರವೇ ನೇರ ಹೊಣೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಗುತ್ತಿಗೆದಾರರ ಸಂಘವು ಕಮಿಷನ್ ಆರೋಪ ಮಾಡಿ ಕಾಮಗಾರಿ ಸ್ಥಗಿತಗೊಳಿಸುವುದಾಗಿ ಎಚ್ಚರಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, “ಅಕ್ರಮಗಳ ಬಗ್ಗೆ ದೂರು ನೀಡಲು ಅವರಿಗೆ ಮುಕ್ತ ಅವಕಾಶವಿದೆ. ಮೊದಲು ಅವರು ಕೆಲಸ ನಿಲ್ಲಿಸಲಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ,” ಎಂದು ಖಡಕ್ ಆಗಿ ಉತ್ತರಿಸಿದರು.

ಬಿಜೆಪಿ ಅವಧಿಯ ಅವಾಂತರ:

“ಯಡಿಯೂರಪ್ಪ ಅವರ ಸರ್ಕಾರವಿದ್ದಾಗ ಖಜಾನೆಯಲ್ಲಿ ಹಣವಿಲ್ಲದಿದ್ದರೂ ಸಾವಿರಾರು ಕೋಟಿ ರೂಪಾಯಿಗಳ ಟೆಂಡರ್ ಕರೆಯಲಾಗಿತ್ತು. 10 ಸಾವಿರ ಕೋಟಿ ಅನುದಾನ ಲಭ್ಯವಿರುವ ಕಡೆ 30-40 ಸಾವಿರ ಕೋಟಿ ರೂ.ಗಳ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಹಣವಿಲ್ಲ ಎಂದು ಗೊತ್ತಿದ್ದರೂ ಗುತ್ತಿಗೆದಾರರು ಅಂದು ಏಕೆ ಕೆಲಸ ಆರಂಭಿಸಿದರು? ನನ್ನ ಇಲಾಖೆಯ ದಾಖಲೆಗಳನ್ನೇ ನಾನು ಬಿಡುಗಡೆ ಮಾಡುತ್ತೇನೆ,” ಎಂದು ಸವಾಲು ಹಾಕಿದರು.

ಬ್ಲ್ಯಾಕ್‌ಮೇಲ್‌ಗೆ ಮಣಿಯಲ್ಲ:

ಕೆಲಸ ನಿಲ್ಲಿಸುವ ಗುತ್ತಿಗೆದಾರರ ಬೆದರಿಕೆಗೆ ಪ್ರತಿಕ್ರಿಯಿಸಿದ ಡಿಸಿಎಂ, “ಬ್ಲ್ಯಾಕ್‌ಮೇಲ್ ತಂತ್ರಗಳಿಗೆ ನಮ್ಮ ಸರ್ಕಾರ ಮಣಿಯುವುದಿಲ್ಲ. ಬಜೆಟ್‌ನಲ್ಲಿ ನಿಗದಿಪಡಿಸಿದಂತೆ ಹಂತ ಹಂತವಾಗಿ ಹಣ ಬಿಡುಗಡೆ ಮಾಡುತ್ತಿದ್ದೇವೆ. ನಮಗೂ ಮಾನವೀಯತೆ ಇದೆ, ಆದರೆ ನಿಯಮ ಮೀರಿ ನಡೆಯಲು ಸಾಧ್ಯವಿಲ್ಲ,” ಎಂದರು.

ಇದೇ ವೇಳೆ ‘ಅನ್ನಭಾಗ್ಯ’ ಯೋಜನೆಯಲ್ಲಿ ನಕಲಿ ಬೆರಳಚ್ಚು ಬಳಸಿ ಅಕ್ಕಿ ಲೂಟಿ ಮಾಡುತ್ತಿರುವ ದೂರಿನ ಬಗ್ಗೆ ಕೇಳಿದ ಪ್ರಶ್ನೆಗೆ, “ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ,” ಎಂದು ತಿಳಿಸಿದರು.


Share this with Friends

Related Post