Thu. Mar 5th, 2026

ಜಾಗತಿಕ ಜಲ ನಕ್ಷೆಯಲ್ಲಿ ಬೆಂಗಳೂರಿನ ಮುದ್ರೆ: ಆವಿಷ್ಕಾರದ ಹಾದಿಯಲ್ಲಿ ಜಲಮಂಡಳಿಯ ಆರು ದಶಕಗಳ ಪಯಣ

Share this with Friends

ಬೆಂಗಳೂರು: ದೇಶದ ವೇಗವಾಗಿ ಬೆಳೆಯುತ್ತಿರುವ ಮಹಾನಗರಕ್ಕೆ ನೀರುಣಿಸುವುದು ಸಣ್ಣ ಮಾತಲ್ಲ. ಆದರೆ, ಕಳೆದ 60 ವರ್ಷಗಳಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಈ ಸವಾಲನ್ನು ಯಶಸ್ವಿಯಾಗಿ ನಿಭಾಯಿಸುವುದಷ್ಟೇ ಅಲ್ಲದೆ, ಇಂದು ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ. ಕೇವಲ ನೀರು ಪೂರೈಕೆಯ ಸಂಸ್ಥೆಯಾಗಿ ಉಳಿಯದೆ, ಜಲ ಸಂರಕ್ಷಣೆಯ ‘ಅಂತಾರಾಷ್ಟ್ರೀಯ ಮಾದರಿ’ಯಾಗಿ ಜಲಮಂಡಳಿ ಹೊರಹೊಮ್ಮಿದೆ.

ದಾಖಲೆಗಳ ಸರದಾರ:

ಪ್ರತಿದಿನ 1.4 ಕೋಟಿಗೂ ಅಧಿಕ ಜನರಿಗೆ ಸುಮಾರು 2225 ಎಂಎಲ್‍ಡಿ (MLD) ಶುದ್ಧ ನೀರನ್ನು ಪೂರೈಸುತ್ತಿರುವ ಮಂಡಳಿ, ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿಲ್ಲ. ಕುಡಿಯುವ ನೀರಿನ ಶುದ್ಧತೆಗಾಗಿ ‘BIS’ ಪ್ರಮಾಣಪತ್ರ ಪಡೆದ ದೇಶದ ಮೊದಲ ಜಲಮಂಡಳಿ ಎಂಬ ಹೆಗ್ಗಳಿಕೆ ಬೆಂಗಳೂರಿನದ್ದು. ಇತ್ತೀಚೆಗೆ 2025ರಲ್ಲಿ ಜಲ ಸಂರಕ್ಷಣಾ ಜಾಗೃತಿಗಾಗಿ ‘ಗಿನ್ನೆಸ್ ವಿಶ್ವ ದಾಖಲೆ’ ಬರೆದಿರುವುದು ಹಾಗೂ ಯುನೆಸ್ಕೋ (UNESCO) ಸಹಯೋಗದ ‘ವರ್ಲ್ಡ್ ವಾಟರ್ ಅವಾರ್ಡ್’ ಪಡೆದಿರುವುದು ಮಂಡಳಿಯ ಮುಕುಟಕ್ಕೆ ಹೊಸ ಗರಿಗಳನ್ನು ಇಟ್ಟಿದೆ.

ತ್ಯಾಜ್ಯನೀರೇ ಇಲ್ಲಿ ಸಂಪತ್ತು:

ನಗರದ ತ್ಯಾಜ್ಯನೀರನ್ನು ಶಾಪವೆಂದು ಭಾವಿಸದೆ, ಅದನ್ನು ವರದಾನವನ್ನಾಗಿ ಪರಿವರ್ತಿಸಿರುವುದು BWSSBಯ ದೊಡ್ಡ ಸಾಧನೆ. ನಗರದ 34 ಅತ್ಯಾಧುನಿಕ ಸಂಸ್ಕರಣಾ ಘಟಕಗಳ (STP) ಮೂಲಕ ಶೇ. 90ರಷ್ಟು ನೀರನ್ನು ಸಂಸ್ಕರಿಸಲಾಗುತ್ತಿದೆ. ಈ ನೀರನ್ನು ಕೃಷಿ, ಕೈಗಾರಿಕೆ ಮತ್ತು ಕೆರೆಗಳ ಪುನರುಜ್ಜೀವನಕ್ಕೆ ಬಳಸಲಾಗುತ್ತಿದ್ದು, ಇದರಿಂದ ಮಂಡಳಿಗೆ ವಾರ್ಷಿಕ 40 ಕೋಟಿ ರೂ.ಗೂ ಅಧಿಕ ಆದಾಯ ಹರಿದು ಬರುತ್ತಿದೆ. ಇದು ಸುಸ್ಥಿರ ಆರ್ಥಿಕತೆಗೆ ಅತ್ಯುತ್ತಮ ಉದಾಹರಣೆ.

ಪರಿಸರ ಸ್ನೇಹಿ ಹೆಜ್ಜೆ:

ಜಲಮಂಡಳಿಯು ಕೇವಲ ನೀರಿಗೆ ಸೀಮಿತವಾಗಿಲ್ಲ. ಜೈವಿಕ ಅನಿಲದ (Biogas) ಮೂಲಕ 4.5 MWh ವಿದ್ಯುತ್ ಉತ್ಪಾದಿಸುವ ಮೂಲಕ ಇಂಧನ ಉಳಿತಾಯಕ್ಕೂ ಒತ್ತು ನೀಡಿದೆ. 2024ರ ‘CII IGBC ಗ್ರೀನ್ ಪ್ರಾಜೆಕ್ಟ್’ ಪ್ರಶಸ್ತಿಯು ಮಂಡಳಿಯ ಪರಿಸರ ಕಾಳಜಿಗೆ ಸಂದ ಗೌರವವಾಗಿದೆ.

2030ರ ಸಂಕಲ್ಪ:

“ಪೂರೈಕೆಗೂ ಮೀರಿದ ಸೇವೆ” ಎಂಬ ಧ್ಯೇಯದೊಂದಿಗೆ ಮಂಡಳಿಯು 2030ರ ವೇಳೆಗೆ ಶೇ. 100ರಷ್ಟು ಸಂಸ್ಕರಿಸಿದ ನೀರಿನ ಮರುಬಳಕೆಯ ಗುರಿ ಹೊಂದಿದೆ. ಇದರಲ್ಲಿ ಶೇ. 75ರಷ್ಟು ನೀರನ್ನು ಪರಿಸರ ಮತ್ತು ಕೆರೆಗಳ ರಕ್ಷಣೆಗೆ ಹಾಗೂ ಶೇ. 25ರಷ್ಟು ವಾಣಿಜ್ಯ ಉದ್ದೇಶಗಳಿಗೆ ಬಳಸುವ ನೀಲನಕ್ಷೆ ಸಿದ್ಧವಾಗಿದೆ.

ಬೆಂಗಳೂರಿನ ಪ್ರತಿ ಹನಿಯ ಹಿಂದೆ ಜಲಮಂಡಳಿಯ ಸಾವಿರಾರು ಸಿಬ್ಬಂದಿಗಳ ಶ್ರಮವಿದೆ. ಜಲ ಸಂರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಅದು ಪ್ರಜೆಗಳ ಕರ್ತವ್ಯವೂ ಹೌದು ಎಂಬ ಸಂದೇಶದೊಂದಿಗೆ BWSSB ತನ್ನ ಯಶೋಗಾಥೆಯನ್ನು ಮುಂದುವರಿಸಿದೆ.

“ತಂತ್ರಜ್ಞಾನ ಮತ್ತು ಪರಿಸರ ಸ್ನೇಹಿ ಕ್ರಮಗಳನ್ನು ಅಳವಡಿಸಿಕೊಳ್ಳುವಲ್ಲಿ ನಾವು ದೇಶದಲ್ಲೇ ಮುಂಚೂಣಿಯಲ್ಲಿದ್ದೇವೆ. ನಮ್ಮ STP ಘಟಕಗಳು ಇಂದು ಅಂತರರಾಷ್ಟ್ರೀಯ ಗುಣಮಟ್ಟದ ನೀರನ್ನು ಉತ್ಪಾದಿಸುತ್ತಿವೆ. ಗಿನ್ನೆಸ್ ದಾಖಲೆ ಮತ್ತು ಯುನೆಸ್ಕೋ ಗೌರವಗಳು ನಮ್ಮ ಇಡೀ ತಂಡದ ಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿದೆ. ಸಾರ್ವಜನಿಕರು ಜಲ ಸಂರಕ್ಷಣೆಯಲ್ಲಿ ನಮ್ಮೊಂದಿಗೆ ಕೈಜೋಡಿಸಬೇಕು.”ಎಂದು ಜಲಮಂಡಳಿ ಮುಖ್ಯ ಅಭಿಯಂತರರು ಮನವಿ ಮಾಡಿದ್ದಾರೆ.

 


Share this with Friends

Related Post