Fri. Nov 1st, 2024

ಸಿದ್ದರಾಮಯ್ಯ‌ ರಾಜೀನಾಮೆ ನೀಡುವುದು ಸೂಕ್ತ-ಅಶೋಕ್

Share this with Friends

ಬೆಂಗಳೂರು: ಸಿಎಂ ಯಾರಾಗಬೇಕೆಂದು ಕಾಂಗ್ರೆಸ್‌ ಪಕ್ಷದೊಳಗೆ ಚರ್ಚೆ ನಡೆಯುತ್ತಿದೆ ಹಾಗಾಗಿ ಸಿದ್ದರಾಮಯ್ಯ ಈಗ ರಾಜೀನಾಮೆ ನೀಡುವುದೇ ಸೂಕ್ತ ಎಂದು ಪ್ರತಿಪಕ್ಷ ನಾಯಕ ಅಶೋಕ್ ಹೇಳಿದರು.

ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮಾತನಾಡಿದ ಅಶೋಕ್,ಸಿದ್ದರಾಮಯ್ಯ ರಾಜೀನಾಮೆ ನೀಡದಿದ್ದರೆ ಅವರ ಪಕ್ಷದವರೇ ದಂಗೆ‌ ಏಳುತ್ತಾರೆ ಎಂದು ತಿಳಿಸಿದರು.

ಹೈಕೋರ್ಟ್‌ನಿಂದ ತೀರ್ಪು ಬಂದ ನಂತರವೂ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿಲ್ಲ, ಬಿ.ಎಸ್‌.ಯಡಿಯೂರಪ್ಪನವರ ಮೇಲೆ ಆರೋಪ ಬಂದಾಗ ಸಿದ್ದು ರಾಜೀನಾಮೆಗೆ ಒತ್ತಾಯಿಸಿದ್ದರು. ತನಿಖೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದೂ ಹೇಳಿದ್ದರು. ಈಗ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಕೆ.ಎಸ್‌.ಈಶ್ವರಪ್ಪ ಅವರ ಮೇಲೆ ಆರೋಪ ಬಂದಾಗಲೂ ಇದೇ ರೀತಿ ವಿಧಾನಸಭೆಯಲ್ಲಿ ಪ್ರತಿಭಟಿಸಿದ್ದರು. ಸಚಿವರಾಗಿದ್ದ ಬಿ.ನಾಗೇಂದ್ರ ಮೇಲೆ ಆರೋಪ ಬಂದು ಅವರು ರಾಜೀನಾಮೆ ನೀಡಿದ್ದಾರೆ. ಆದರೆ ಸಿಎಂ ಮಾತ್ರ ರಾಜೀನಾಮೆ ನೀಡುತ್ತಿಲ್ಲ ಎಂದು ಟೀಕಿಸಿದರು.

ವಾಲ್ಮೀಕಿ ನಿಗಮದ ಪರಿಶಿಷ್ಟ ಪಂಗಡದವರ ಹಣ ದುರ್ಬಳಕೆಯಾಗಿದೆ ಎಂದು ಸರ್ಕಾರ ಒಪ್ಪಿಕೊಂಡಿದೆ, ಅಭಿವೃದ್ಧಿಗೆ ಕಾಸಿಲ್ಲ, ಆದರೆ ಲೂಟಿಗೆ ಮಾತ್ರ ಹಣ ದೊರೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂತೋಷ್‌ ಹೆಗ್ಡೆಯವರು ಈ ಹಿಂದೆ ಯಡಿಯೂರಪ್ಪನವರ ರಾಜೀನಾಮೆ ಕೇಳಿದ್ದರು. ಈಗ ಸಿದ್ದರಾಮಯ್ಯನವರ ರಾಜೀನಾಮೆ ಕೇಳಿದ್ದಾರೆ. ಹಿರಿಯ ರಾಜಕಾರಣಿ ಕೆ.ಬಿ.ಕೋಳಿವಾಡ ಕೂಡ ರಾಜೀನಾಮೆ ನೀಡುವುದು ಸೂಕ್ತ ಎಂದಿದ್ದಾರೆ. ಈ ಎಲ್ಲರ ಅಭಿಪ್ರಾಯಕ್ಕೆ ಮನ್ನಣೆ ಕೊಟ್ಟು ಸಿದ್ದರಾಮಯ್ಯನವರು ರಾಜೀನಾಮೆ ನೀಡಬೇಕು ಎಂದು ಅಶೋಕ್ ಆಗ್ರಹಿಸಿದರು.

ಇದು ರಾಜಕೀಯ ಪ್ರೇರಿತವಾಗಿದ್ದರೆ ಕೋರ್ಟ್‌ಗಳು ಏಕೆ ತೀರ್ಪು ನೀಡುತ್ತಿದ್ದವು, ಈ ರೀತಿ ಕಾಂಗ್ರೆಸ್‌ ಆರೋಪ ಮಾಡುವುದು ದೊಂಬರಾಟವಾಗಿದೆ ಎಂದು ವ್ಯಂಗ್ಯ ವಾಡಿದರು.


Share this with Friends

Related Post