ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಾಲು ಸಾಲು ಹಬ್ಬಗಳ ಸಂಭ್ರಮ ಮನೆಮಾಡಿದೆ. ಈ ಸಂಭ್ರಮಕ್ಕೆ ಯಾವುದೇ ಕಪ್ಪುಚುಕ್ಕೆ ತಗುಲದಂತೆ ಹಾಗೂ ಸಮಾಜವಿರೋಧಿ ಶಕ್ತಿಗಳ ಹೆಡೆಮುರಿ ಕಟ್ಟಲು ಮೈಸೂರು ನಗರ ಪೊಲೀಸರು ಈಗ ‘ಡ್ರೋಣ್ ಕ್ಯಾಮೆರಾ’ (Drone Camera) ಮೊರೆ ಹೋಗಿದ್ದಾರೆ.
ನಗರದ ಪ್ರಮುಖ ಕೈಗಾರಿಕಾ ವಲಯವಾದ ಹೆಬ್ಬಾಳ್ ಹಾಗೂ ಸುತ್ತಮುತ್ತಲಿನ ರಾಣಿ ಮದ್ರಾಸ್ ರಸ್ತೆ ಸೇರಿದಂತೆ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ.
ಅಪರಾಧಿಗಳಿಗೆ ಎಚ್ಚರಿಕೆ, ಜನತೆಗೆ ಭರವಸೆ:
ಯುಗಾದಿ, ರಂಜಾನ್ ಮತ್ತು ಮಾರಿ ಹಬ್ಬದ ಸಂದರ್ಭದಲ್ಲಿ ಜನದಟ್ಟಣೆಯ ಲಾಭ ಪಡೆಯುವ ಕಿಡಿಗೇಡಿಗಳ ಮೇಲೆ ಈಗ ಡ್ರೋನ್ ಕ್ಯಾಮೆರಾಗಳು ನಿರಂತರ ನಿಗಾ ಇರಿಸಿವೆ. ಸಮಾಜಘಾತುಕ ಶಕ್ತಿಗಳು ಅಡಗಿಕೊಳ್ಳಲು ಬಳಸುವ ನಿರ್ಜನ ಪ್ರದೇಶಗಳು, ಕೈಗಾರಿಕಾ ವಲಯದ ಗಲ್ಲಿಗಲ್ಲಿಗಳ ದೃಶ್ಯಾವಳಿಗಳು ಈಗ ನೇರವಾಗಿ ಪೊಲೀಸ್ ಕಂಟ್ರೋಲ್ ರೂಂಗೆ ಲಭ್ಯವಾಗುತ್ತಿವೆ. ಇದು ಅಪರಾಧ ಎಸಗುವ ಮುನ್ನವೇ ಕಿಡಿಗೇಡಿಗಳಲ್ಲಿ ನಡುಕ ಹುಟ್ಟಿಸಿದೆ.
ಅಕ್ರಮಗಳಿಗೆ ಮುಕ್ತಿ ಹಾಡುವ ಸಂಕಲ್ಪ:
“ಸಾರ್ವಜನಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ” ಎಂಬ ಉದ್ದೇಶದೊಂದಿಗೆ ಹೆಬ್ಬಾಳ್ ಪೊಲೀಸರು ಈ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಡ್ರೋನ್ ಕಣ್ಗಾವಲಿನ ಮೂಲಕ, ಮಾದಕ ದ್ರವ್ಯ ಮಾರಾಟ ಮತ್ತು ಸೇವನೆಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ.ಹಬ್ಬದ ಸಂದರ್ಭದಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳ ಪತ್ತೆ.ಸಂಶಯಾಸ್ಪದ ವ್ಯಕ್ತಿಗಳ ಚಲನವಲನದ ಮೇಲೆ 24/7 ನಿಗಾ ಇರಿಸಲಿದ್ದಾರೆ.
ಸಾರ್ವಜನಿಕರಲ್ಲಿ ಜಾಗೃತಿ ಮನವಿ:
ನಗರ ಪೊಲೀಸ್ ಇಲಾಖೆಯು ಕೇವಲ ದಂಡ ಪ್ರಯೋಗಕ್ಕೆ ಸೀಮಿತವಾಗದೆ, ಜನಸ್ನೇಹಿ ಭದ್ರತೆಯನ್ನು ಒದಗಿಸುತ್ತಿದೆ. ನಿಮ್ಮ ಸುತ್ತಮುತ್ತ ಯಾವುದೇ ಸಂಶಯಾಸ್ಪದ ವ್ಯಕ್ತಿಗಳು ಅಥವಾ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ. ನೆನಪಿಡಿ, ಪೊಲೀಸರ ಈ ಹೈಟೆಕ್ ಕಾವಲು ನಿಮ್ಮ ಮತ್ತು ನಿಮ್ಮ ಕುಟುಂಬದ ಸುರಕ್ಷತೆಗಾಗಿ ಮಾತ್ರ.ಹಬ್ಬಗಳನ್ನು ಶಾಂತಿಯುತವಾಗಿ, ಸೌಹಾರ್ದತೆಯಿಂದ ಆಚರಿಸೋಣ. ಪೊಲೀಸರೊಂದಿಗೆ ಸಹಕರಿಸಿ, ಮೈಸೂರನ್ನು ಸುರಕ್ಷಿತ ನಗರವನ್ನಾಗಿ ಉಳಿಸೋಣ ಎಂದು ಮೈಸೂರು ನಗರ ಪೊಲೀಸರು ಕರೆ ನೀಡಿದ್ದಾರೆ.

