ಬೆಂಗಳೂರು,ಜೂ.7: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಭವಾನಿ ರೇವಣ್ಣ ಅವರಿಗೆ ಹೈಕೋರ್ಟ್ ರಿಲೀಫ್ ನೀಡಿದೆ.
ಪ್ರಕರಣ ಸಂಬಂಧ 42ನೇ ಹೆಚ್ಚುವರಿ ಎಸಿಎಂಎಂ ನ್ಯಾಯಾಲಯ (ಜನ ಪ್ರತಿನಿಧಿಗಳ ವಿಶೇಷ ಕೋರ್ಟ್) ಜಾರಿ ಮಾಡಿದ್ದ ವಾರೆಂಟ್ ಅನ್ನು ಅಮಾನತ್ತಿನಲ್ಲಿಟ್ಟು ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ಮುಂದಿನ ಶುಕ್ರವಾರದವರೆಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಕೆ.ಆರ್ ನಗರ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ಅವರಿಗೆ ಕೊನೆಗೂ ಮಧ್ಯಂತರ ಜಾಮೀನು ಸಿಕ್ಕಿದ್ದು,ಇದರ ಬೆನ್ನಲ್ಲೇ ಅವರು ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾದರು.
ಶುಕ್ರವಾರ ಮಧ್ಯಾಹ್ನ ಒಂದು ಗಂಟೆಗೆ ಎಸ್‌ಐಟಿ ವಿಚಾರಣೆಗೆ ಹಾಜರಾಗುವಂತೆ ಹೈಕೋರ್ಟ್ ಸೂಚಿಸಿದ್ದು ಅದರಂತೆ ಭವಾನಿ ವಿಚಾರಣೆಗೆ ಹಾಜರಾದರು.
ವಿಚಾರಣೆಯ ಬಳಿಕ 5 ಗಂಟೆಗಳ ಕಾಲ ಮಾತ್ರ ಅವರನ್ನು ಕಸ್ಟಡಿಯಲ್ಲಿ ಇರಿಸಿಕೊಳ್ಳಬಹುದು ಎಂದು ಕೋರ್ಟ್ ಆದೇಶಿಸಿದ್ದು ಸಧ್ಯ ಭವಾನಿ ರೇವಣ್ಣಗೆ ರಿಲೀಫ್ ಸಿಕ್ಕಿದಂತಾಗಿದೆ
ಭವಾನಿ ಅವರನ್ನು ಎಸ್‌ಐಟಿ ಬಂಧಿಸಬಾರದು, ಕೆ ಆರ್ ನಗರ ತಾಲೂಕು ಮತ್ತು ಹಾಸನಕ್ಕೆ ಭವಾನಿ ಪ್ರವೇಶಿಸಿಬಾರದು,ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಕೋರ್ಟ್ ಷರತ್ತು ವಿಧಿಸಿ ಮಧ್ಯಂತರ ಜಾಮೀನು ಮಂಜೂರು ಮಾಡಿ
ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದೆ.