ಬೆಂಗಳೂರು: ಸಿಲಿಕಾನ್ ಸಿಟಿ ಜನತೆಗೆ ಸಿಹಿ ಸುದ್ದಿ ಸಿಕ್ಕಿದೆ. ಫೆಬ್ರವರಿ 9ರ ಸೋಮವಾರದಿಂದ ಜಾರಿಗೆ ಬರಬೇಕಿದ್ದ ‘ನಮ್ಮ ಮೆಟ್ರೋ’ ಪ್ರಯಾಣದರ ಏರಿಕೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಸಂಸದ ತೇಜಸ್ವಿ ಸೂರ್ಯ ಅವರು ಕೇಂದ್ರ ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಖಟ್ಟರ್ ಅವರೊಂದಿಗೆ ನಡೆಸಿದ ತುರ್ತು ಸಮಾಲೋಚನೆಯ ಫಲವಾಗಿ ಈ ನಿರ್ಧಾರ ಹೊರಬಿದ್ದಿದೆ.
ಬಿಎಂಆರ್ಸಿಎಲ್ (BMRCL) ವಾರ್ಷಿಕ ಶೇ. 5ರಷ್ಟು ದರ ಹೆಚ್ಚಳ ಮಾಡಲು ತೀರ್ಮಾನಿಸಿತ್ತು. ಇದರಿಂದ ಮೆಟ್ರೋ ಟಿಕೆಟ್ ದರ ಗರಿಷ್ಠ 95 ರೂಪಾಯಿ ತಲುಪುವ ಸಾಧ್ಯತೆಯಿತ್ತು. ಇದರ ವಿರುದ್ಧ ನಗರದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಪರಿಸ್ಥಿತಿಯ ಗಂಭೀರತೆ ಅರಿತ ಸಂಸದ ತೇಜಸ್ವಿ ಸೂರ್ಯ, ಕೇಂದ್ರ ಸಚಿವರನ್ನು ಭೇಟಿ ಮಾಡಿ ಈ ದರ ಏರಿಕೆಯು ಅವೈಜ್ಞಾನಿಕವಾಗಿದೆ ಎಂದು ದೂರು ನೀಡಿದ್ದರು.
ಸಂಸದರ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವರು, ಸದ್ಯಕ್ಕೆ ದರ ಏರಿಕೆ ಮಾಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. “ಜನಸಾಮಾನ್ಯರ ಹಿತದೃಷ್ಟಿಯಿಂದ ಮತ್ತು ದರ ನಿಗದಿಯಲ್ಲಿನ ಗೊಂದಲಗಳನ್ನು ಸರಿಪಡಿಸುವವರೆಗೆ ಸೋಮವಾರದಿಂದ ಯಾವುದೇ ದರ ಏರಿಕೆ ಇರುವುದಿಲ್ಲ” ಎಂದು ತೇಜಸ್ವಿ ಸೂರ್ಯ ಎಕ್ಸ್ (ಟ್ವಿಟರ್) ಮೂಲಕ ಅಧಿಕೃತವಾಗಿ ತಿಳಿಸಿದ್ದಾರೆ. ಇದರಿಂದಾಗಿ ಬೆಲೆ ಏರಿಕೆಯ ಬಿಸಿಯಲ್ಲಿ ಬೆಂದಿದ್ದ ಬೆಂಗಳೂರಿಗರು ಈ ನಿರ್ಧಾರದಿಂದ ನಿರಾಳವಾಗಿದ್ದಾರೆ. ಸ್ಮಾರ್ಟ್ ಕಾರ್ಡ್ ರಿಯಾಯಿತಿಗಳು ಎಂದಿನಂತೆ ಮುಂದುವರಿಯಲಿದ್ದು, ಕನಿಷ್ಠ ಮತ್ತು ಗರಿಷ್ಠ ದರಗಳಲ್ಲಿ ಸೋಮವಾರ ಯಾವುದೇ ಬದಲಾವಣೆ ಇರುವುದಿಲ್ಲ.
ಸಂಸದರ ವಾದವೇನು?
ಈಗಾಗಲೇ ದೇಶದ ಇತರೆ ಮೆಟ್ರೋಗಳಿಗೆ ಹೋಲಿಸಿದರೆ ಬೆಂಗಳೂರು ಮೆಟ್ರೋ ದರಗಳು ಅತ್ಯಂತ ದುಬಾರಿಯಾಗಿವೆ. ಬಿಎಂಆರ್ಸಿಎಲ್ ನೀಡಿದ ದರ ಪರಿಷ್ಕರಣಾ ವರದಿಯಲ್ಲಿ ಗಣಿತದ ದೋಷಗಳಿವೆ ಮತ್ತು ಮೂಲ ವರ್ಷದ ಆಯ್ಕೆ ಸರಿಯಾಗಿಲ್ಲ. ಈಗಿರುವ ದರ ನಿಗದಿ ಸಮಿತಿಯನ್ನು (FFC) ಪುನರ್ ರಚಿಸಿ, ದರಗಳನ್ನು ತರ್ಕಬದ್ಧಗೊಳಿಸಬೇಕು ಎಂದು ಸೂರ್ಯ ಒತ್ತಾಯಿಸಿದ್ದರು.

