ದಾವಣಗೆರೆ: ಬಿಹಾರದಲ್ಲಿ ಸೋತ ಮಾತ್ರಕ್ಕೆ ಕರ್ನಾಟಕದಲ್ಲಿಯೂ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸೋಲಾಗುತ್ತದೆ ಎನ್ನುವ ಅಗತ್ಯವಿಲ್ಲ,ಬಿಹಾರಕ್ಕೂ ಕರ್ನಾಟಕಕ್ಕೂ ಸಾಕಷ್ಟು ಭಿನ್ನತೆ ಇದೆ ಅಲ್ಲಿನ ಸೋಲಿನ ಪಾಠ ಕಲಿತು ಲೋಪ ಸರಿಪಡಿಸಿಕೊಂಡು ಚುನಾವಣೆ ಗೆಲ್ಲುತ್ತೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರ ಚುನಾವಣೆಯಿಂದ ಸಿದ್ದರಾಮಯ್ಯ ಮತ್ತಷ್ಟು ಗಟ್ಟಿಯಾಗಿದ್ದಾರೆ ಎಂದೇನಿಲ್ಲ ಅವರು ಮೊದಲಿನಿಂದಲೂ ಗಟ್ಟಿಯಾಗಿದ್ದಾರೆ ಆದರೆ ಕಾಂಗ್ರೆಸ್ ಗೆ ಈ ಫಲಿತಾಂಶ ಪಾಠವಾಗಬೇಕು, ಎಲ್ಲಿ ಲೋಪದೋಷಗಳಿವೆಯೋ ಕರ್ನಾಟಕದಲ್ಲಿ ಅದನ್ನು ಸರಿಪಡಿಸಿಕೊಳ್ಳಲು ನೋಡಬೇಕು ಎಂದರು.
ಚುನಾವಣೆಗೂ ಮೊದಲೇ ಸಾಕಷ್ಟು ಕಡೆ ಮತ ಕಳ್ಳತನ ಆರೋಪ ಕೇಳಿಬಂದಿದೆ, ಚುನಾವಣಾ ಆಯೋಗ ಇದಕ್ಕೆಲ್ಲಾ ಉತ್ತರ ಕೊಡಬೇಕು ಉತ್ತರ ಕೊಟ್ಟರೆ ಸರಿಯಾಗಲಿದೆ ಎಂದರು.
ಬಿಹಾರ ಚುನಾವಣೆಗೂ ಕರ್ನಾಟಕಕ್ಕೂ ಹೋಲಿಕೆ ಮಾಡುವುದು ಸರಿಯಲ್ಲ ಇಲ್ಲಿನ ಸಂಖ್ಯೆ, ಚಿತ್ರಣ,ರಾಜಕೀಯ ಸ್ಥಿತಿಗತಿ ಎಲ್ಲವೂ ಬೇರೆ ಇದೆ ಅಲ್ಲಿ ಸೋತಿದ್ದೇವೆ ಎಂದು ಇಲ್ಲಿಯೂ ಸೋಲುತ್ತೇವೆ ಎಂದೇನಿಲ್ಲ, ಇದು ವಿಭಿನ್ನ ರಾಜ್ಯ ಇಲ್ಲಿ ಅಹಿಂದಾಗೆ ಹೆಚ್ಚಿನ ಮತವಿದೆ ಬಿಹಾರದಲ್ಲಿ ಎಲ್ಲರನ್ನು ಒಗ್ಗೂಡಿಸಲು ಸಾಧ್ಯವಾಗಿಲ್ಲ ಆದರೆ ಇಲ್ಲಿ ನಾವು ಅಹಿಂದವನ್ನು ಒಗ್ಗೂಡಿಸಿದ್ದೇವೆ ಹಾಗಾಗಿ ಇಲ್ಲಿನ ಫಲಿತಾಂಶ ಬೇರೆಯ ರೀತಿಯಾಗಿಯೇ ಇರಲಿದೆ ಎಂದರು.
ಸಧ್ಯ ಮುಖ್ಯಮಂತ್ರಿಗಳ ಬದಲಾವಣೆ ಪ್ರಶ್ನೆ ಇಲ್ಲ ಈ ಬಗ್ಗೆ ಎಲ್ಲರೂ ಹೇಳಿದ್ದಾರೆ. ನಮ್ಮ ನಾಯಕರೇ ಹೇಳಿದ ನಂತರ ಚರ್ಚೆ ಅನಗತ್ಯ ಎಂದ ಸಚಿವ ಜಾರಕಿಹೊಳಿ ಸಚಿವ ಸಂಪುಟ ಪುನಾರಚನೆ ವಿಷಯ ಗೊತ್ತಿಲ್ಲ,ರಾಹುಲ್ ಗಾಂಧಿ ಅವರು ಈ ಬಗ್ಗೆ ನನ್ನೊಂದಿಗೆ ಚರ್ಚೆ ಮಾಡಲ್ಲ, ನಾನು ಸಂಬಂಧಿಸಿದ ವ್ಯಕ್ತಿಯೇ ಅಲ್ಲ,ಇದನ್ನೆಲ್ಲಾ ಮುಖ್ಯಮಂತ್ರಿಗಳು,ವರಿಷ್ಠರು ನಿರ್ಧರಿಸಲಿದ್ದಾರೆ ಆದರೆ ಸಂಪಟ ವಿಸ್ತರಣೆಯಾದರೆ ಮತ್ತೆ ಎರಡು ಸ್ಥಾನ ವಾಲ್ಮೀಕಿ ಸಮುದಾಯಕ್ಕೆ ನೀಡಬೇಕೆಂದು ಕೇಳುತ್ತೇವೆ,ಅವರ ಕೊಡುಗೆ ಸಾಕಷ್ಟಿದೆ ಹಾಗಾಗಿ ಅವರಿಗೆ ಕೊಟ್ಟರೆ ಒಳ್ಳೆಯದಾಗಲಿದೆ ಎನ್ನುತ್ತೇವೆ, ಸ್ಥಾನ ಕೇಳುವುದು ಮಾತ್ರ ನಮಗೆ ಸೇರಿದ್ದು, ಯಾರಿಗೆ ಕೊಡಬೇಕು ಎಂದು ವರಿಷ್ಠರು ನಿರ್ಧರಿಸಲಿದ್ದಾರೆ ಎಂದರು.

