ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ ಕೆ.ಆರ್. ಪುರಂ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಬೈರತಿ ಬಸವರಾಜ್ ಅವರು ಶುಕ್ರವಾರ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಗುರುವಾರವಷ್ಟೇ ಇವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಶುಕ್ರವಾರ ಮಧ್ಯಾಹ್ನದ ವೇಳೆಗೆ ನ್ಯಾಯಾಲಯದ ಆದೇಶದ ಪ್ರತಿ ಜೈಲು ಅಧಿಕಾರಿಗಳಿಗೆ ತಲುಪಿದ ನಂತರ, ಬಿಡುಗಡೆಯ ಪ್ರಕ್ರಿಯೆಗಳು ಪೂರ್ಣಗೊಂಡವು. ಮಧ್ಯಾಹ್ನ 3:30ರ ಸುಮಾರಿಗೆ ಅವರು ಜೈಲಿನಿಂದ ಹೊರಬಂದರು.
ಜಾಮೀನು ಷರತ್ತುಗಳು:
ನ್ಯಾಯಾಲಯವು ಬೈರತಿ ಬಸವರಾಜ್ ಅವರಿಗೆ ಕೆಲವು ಕಠಿಣ ಷರತ್ತುಗಳನ್ನು ವಿಧಿಸಿದೆ. 2 ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್ ಹಾಗೂ ಇಬ್ಬರ ಶೂರಿಟಿಯನ್ನು ಒದಗಿಸುವಂತೆ ಸೂಚಿಸಿದೆ. ಅಲ್ಲದೆ, ತನಿಖಾಧಿಕಾರಿಗಳ ಮುಂದೆ ನಿಯಮಿತವಾಗಿ ಹಾಜರಾಗಬೇಕು, ಸಾಕ್ಷ್ಯ ನಾಶಪಡಿಸಬಾರದು ಮತ್ತು ನ್ಯಾಯಾಲಯದ ಅನುಮತಿಯಿಲ್ಲದೆ ವಿದೇಶ ಪ್ರವಾಸ ಮಾಡುವಂತಿಲ್ಲ ಎಂದು ಆದೇಶಿಸಿದೆ.
ಹಿನ್ನೆಲೆ:
ಕಳೆದ ತಿಂಗಳು ಸಿಐಡಿ ಪೊಲೀಸರು ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ 5ನೇ ಆರೋಪಿಯಾಗಿ ಬೈರತಿ ಬಸವರಾಜ್ ಅವರನ್ನು ಬಂಧಿಸಿದ್ದರು. ಸುಮಾರು ಒಂದು ತಿಂಗಳ ಕಾಲ ಜೈಲಿನಲ್ಲಿದ್ದ ಇವರು, ಇದೀಗ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಜೈಲಿನಿಂದ ಹೊರಬರುತ್ತಿದ್ದಂತೆ ಅವರ ಬೆಂಬಲಿಗರು ಜೈಲಿನ ಮುಂಭಾಗದಲ್ಲಿ ಜಮಾಯಿಸಿ ಸಂಭ್ರಮಿಸಿದರು.

