Sun. Dec 22nd, 2024

ಕೇತುಪುರ ಗ್ರಾ ಪಂಗೆ ಜಿ ಪಂ ಸಿಇಒ ಗಾಯಿತ್ರಿಧಿಡೀರ್ ಭೇಟಿ

Share this with Friends

ಮೈಸೂರು‌: ಟಿ.ನರಸೀಪುರ ತಾಲೂಕಿನ ಕೇತುಪುರ ಗ್ರಾಮ ಪಂಚಾಯಿತಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ‌‌
ನಿರ್ವಹಣಾಧಿಕಾರಿ ಕೆ.ಎಂ. ಗಾಯಿತ್ರಿ ಧಿಡೀರ್ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.

ಕೇತುಪುರ ಗ್ರಾಮದ ಬಹುಗ್ರಾಮ ಕುಡಿಯುವ ನೀರು ಸ್ಥಾವರಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಸ್ಥಾವರದ ಜಾಕ್ ವೆಲ್ ಸುತ್ತ ಸ್ವಚ್ಛಗೊಳಿಸಿ, ರಿಟೈನಿಂಗ್ ವಾಲ್ ನಿರ್ಮಿಸುವಂತೆ ಸೂಚಿಸಿದರು.

ಪ್ಯಾನಲ್ ಬೋರ್ಡ್ ದುರಸ್ತಿಯಾಗಿದ್ದು ಕೂಡಲೇ ಸರಿಪಡಿಸಲು ಕ್ರಮ ವಹಿಸುವಂತೆ ಆದೇಶಿಸಿದರು.

ನೀರಿನ ಶುದ್ಧೀಕರಣ ಘಟಕ ಅರಣ್ಯದಿಂದ ಸುತ್ತುವರೆದಿದ್ದು ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿರುವುದರಿಂದ ಅಲ್ಲಿನ ಸಿಬ್ಬಂದಿಗಳ ಸುರಕ್ಷತೆಯ ದೃಷ್ಟಿಯಿಂದ ಘಟಕದ ಸುತ್ತ ಸೋಲಾರ್ ಫೆನ್ಸಿಂಗ್ ಅಳವಡಿಸಿಕೊಳ್ಳುವಂತೆ ಗಾಯಿತ್ರಿ ಸಲಹೆ ನೀಡಿದರು.

ಮುಖ್ಯ ರಸ್ತೆಯಿಂದ ನೀರಿನ ಶುದ್ಧಿಕರಣ ಘಟಕಕ್ಕೆ ಬರುವ ರಸ್ತೆಯು ಅರಣ್ಯ ಇಲಾಖೆಯ ಸುಪರ್ದಿಗೆ ಬರುವುದರಿಂದ ಅರಣ್ಯ ಇಲಾಖೆಗೆ ಪತ್ರ ಬರೆದು ಅನುಮತಿ ಪಡೆದು ರಸ್ತೆ ನಿರ್ಮಾಣ ಮಾಡಿಕೊಳ್ಳಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗ್ರಾಮಸ್ಥರಿಗೆ ಬೋರ್ ವೆಲ್ ನೀರನ್ನು ಕೊಡುವುದರ ಬದಲಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಸರಬರಾಜು ಮಾಡುವ ನದಿ ನೀರನ್ನು ಟ್ಯಾಂಕುಗಳಿಗೆ ಹರಿಸಿ, ಅದೇ ನೀರನ್ನು ಜನರಿಗೆ ಕೊಡುವಂತೆ ಪಿಡಿಒ ಗೆ ಸೂಚಿಸಿದರು.

ನಂತರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ಇ ಹಾಜರಾತಿಯನ್ನು ವೆಬ್ ತಂತ್ರಾಂಶದಲ್ಲಿ ಪರಿಶೀಲಿಸಿ ತಡವಾಗಿ ಹಾಜರಾತಿ ನಮೂದಿಸುತ್ತಿರುವ ಸಿಬ್ಬಂದಿಗಳಿಗೆ ನೋಟಿಸ್ ನೀಡಲು ಸಿಇಒ ಆದೇಶಿಸಿದರು.

ನಂತರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳಿಗೆ ನೀಡುತ್ತಿರುವ ಆಹಾರವನ್ನು ಸ್ವತಃ ತಾವೇ ಸೇವಿಸಿ ಆಹಾರ ಗುಣಮಟ್ಟವನ್ನು ಗಾಯಿತ್ರಿ ಪರಿಶೀಲಿಸಿದರು.

ಕೇತುಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶೌಚಾಲಯ, ಆಟದ ಮೈದಾನ, ಶಾಲಾ ಕಾಂಪೌಂಡ್, ಶಾಲಾ ಕೊಠಡಿಗಳನ್ನು ಪರಿಶೀಲಿಸಿ ಮಕ್ಕಳೊಂದಿಗೆ ಸಂವಾದ ನಡೆಸಿದರು‌

ಈ ವೇಳೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ರಂಜಿತ್, ಕಾರ್ಯನಿರ್ವಾಹಕ ಅಧಿಕಾರಿಗಳಾದ ಪಿ. ಎಸ್. ಅನಂತರಾಜು, ಪಿ ಆರ್ ಇ ಡಿ ಇಲಾಖೆಯ ಇ ಇ ವೀರೇಶ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎ ಇ ಇ ಹರ್ಷದ್ ಪಾಷಾ, ತಾಲ್ಲೂಕು ಯೋಜನಾಧಿಕಾರಿ ರಂಗಸ್ವಾಮಿ, ಪಿಡಿಒ ರವೀಂದ್ರ, ಕಾರ್ಯದಶಿ ಆಶಾಲತಾ ಹಾಗೂ ಸಿಬ್ಬಂದಿಗಳು ಹಾಜರಿದ್ದರು.


Share this with Friends

Related Post