Thu. Mar 5th, 2026

ಬಿಜೆಪಿಯಿಂದ ವೋಟ್ ಚೋರಿ ಆರೋಪ: ಸ್ಥಳೀಯ ಸಂಸ್ಥೆ ಚುನಾವಣೆಗೆ ಬ್ಯಾಲೆಟ್ ಬಳಕೆಗೆ ಚಿಂತನೆ

Share this with Friends

ಬೆಂಗಳೂರು: ಬಿಜೆಪಿಯಿಂದ ಇವಿಎಂ ಬಳಕೆಯಲ್ಲಿ ಮತಗಳ್ಳತನ ನಡೆಯುತ್ತಿರುವುದರಿಂದಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸೇರಿದಂತೆ ಮುಂಬರುವ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಇವಿಎಂ ಬದಲು ಬ್ಯಾಲಟ್ ಪೇಪರ್ ಬಳಕೆ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಮತ ಕಳ್ಳತನ ತಡೆದು ಪ್ರಜಾಪ್ರಭುತ್ವ ಉಳಿಸಲು ಕರ್ನಾಟಕದಿಂದ ಧ್ವನಿ ಎತ್ತಿರುವ ರಾಹುಲ್‌ ಗಾಂಧಿ ಅವರಿಗೆ ಕಾಂಗ್ರೆಸ್‌ ಪಕ್ಷ ಸೇರಿದಂತೆ ಎಲ್ಲಾ ಸಾರ್ವಜನಿಕರು ಪಕ್ಷಬೇಧ ಮರೆತು ಪ್ರತಿಯೊಬ್ಬರು ಸಹಕಾರ ನೀಡಬೇಕಿದೆ. ಮತದಾನದ ಹಕ್ಕಿನ ರಕ್ಷಣೆಗಾಗಿ ಸಹಿ ಸಂಗ್ರಹ ಅಭಿಯಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ನಾನು ಕೂಡ ಪಾಲ್ಗೊಂಡಿದ್ದೇವೆ. ವೋಟ್‌ ಚೋರಿ ವಿರುದ್ಧದ ಸಹಿ ಸಂಗ್ರಹ ಅಭಿಯಾನದಲ್ಲಿ ರಾಜ್ಯದಲ್ಲಿ ಇದುವರೆಗೆ 1,12,41,000 ಮತದಾರರು ಸಹಿ ಮಾಡಿ ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ಸಹಿ ಸಂಗ್ರಹಕ್ಕೆ ಸಂಬಂಧಿಸಿದ ದಾಖಲೆಗಳನ್ನು 10ನೇ ತಾರೀಖಿನಂದು ದೆಹಲಿಯ ಎಐಸಿಸಿ ಕಚೇರಿಗೆ ತೆಗೆದುಕೊಂಡು ಹೋಗಿ ಮಾಹಿತಿ ನೀಡಲಾಗುವುದು ಎಂದರು.

ಮತಗಳ್ಳತನ ವಿರುದ್ಧ ರಾಮ್‌ಲೀಲಾ ಮೈದಾನದಲ್ಲಿ ಬೃಹತ್ ಸಭೆ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಮತ ಕಳವು ವಿರುದ್ಧ ಅಭಿಯಾನದಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ಧನ್ಯವಾದಗಳು.ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲಟ್ ಪೇಪರ್ ಬಳಕೆ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಮತಗಳ್ಳತನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.

ಪ್ರಜಾಪ್ರಭುತ್ವದ ಶಕ್ತಿಯಾದ ಮತವನ್ನು ಕದಿಯುವ ಪ್ರಯತ್ನಗಳ ವಿರುದ್ಧ ನಮ್ಮ ನಾಯಕ ರಾಹುಲ್ ಗಾಂಧಿ ಅವರು ಕರ್ನಾಟಕದಿಂದಲೇ ಧ್ವನಿ ಎತ್ತಿದ್ದಾರೆ. ಮಹದೇವಪುರ, ಆಳಂದ ಮಾತ್ರವಲ್ಲದೆ ವ್ಯಾಪಕವಾಗಿ ಹೊರ ರಾಜ್ಯಗಳಲ್ಲಿಯೂ ಮತಗಳ್ಳತನ ಪ್ರಕರಣಗಳು ನಡೆದಿರುವ ಬಗ್ಗೆ ಸಾಕ್ಷಿಸಮೇತ ಮಾಹಿತಿ ನೀಡಿ, ಮತದಾರರ ಹಕ್ಕುಗಳ ಉಳಿವಿಗಾಗಿ ಹೋರಾಟ ಮುಂದುವರೆಸಿದ್ದಾರೆ. ಈ ಹಿಂದೆ ಚಿಲುಮೆ ಸಂಸ್ಥೆಯನ್ನು ಬಳಸಿಕೊಂಡು ಯಾವ ರೀತಿಯಲ್ಲಿ ಮತದಾರರ ಮಾಹಿತಿ ಕಳ್ಳತನ ಮಾಡಲಾಯಿತು ಎಂಬುದು ರಾಜ್ಯದ ಜನರು ಗಮನಿಸಿದ್ದಾರೆ. ಆಳಂದ ಕ್ಷೇತ್ರದಲ್ಲಿ 2023ರ ವಿಧಾನಸಭಾ ಚುನಾವಣೆಗೆ ಮುನ್ನ 6,018 ಮತಗಳನ್ನು ಅಳಿಸಲು ಪ್ರಯತ್ನ ನಡೆದಿತ್ತು. ಇದೇ ರೀತಿ ರಾಜಸ್ಥಾನ, ಮಹಾರಾಷ್ಟ್ರ ಮತ್ತು ಹರಿಯಾಣ ಸೇರಿದಂತೆ ಹಲವಾರು ಇತರ ರಾಜ್ಯಗಳಲ್ಲಿ ಅಕ್ರಮಗಳು ಕಂಡುಬಂದಿವೆ.ಆಳಂದದಲ್ಲಿ ಬೆಳಗಿನ ಜಾವ ವೋಟ್ ಡಿಲೀಟ್ ಮಾಡಿಸುತ್ತಿದ್ದದ್ದು, ಜೊತೆಗೆ ಬೇರೆ ಬೇರೆ ರಾಜ್ಯಗಳ ಫೋನ್ ನಂಬರ್ ಬಳಸಿ ಮತಗಳ್ಳತನಕ್ಕೆ ಯತ್ನಿಸಿರುವುದು ಎಲ್ಲವೂ ಎಸ್‌ಐಟಿ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಡಿಸಿಎಂ ಆರೋಪಿಸಿದರು.


Share this with Friends

Related Post