ಬೆಂಗಳೂರು: ರಾಜ್ಯ ರಾಜಕಾರಣದ ಮುಂದಿನ ಕುತೂಹಲದ ಕೇಂದ್ರಬಿಂದುವಾಗಿರುವ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ಈಗಿನಿಂದಲೇ ರಣತಂತ್ರ ರೂಪಿಸಲು ಮುಂದಾಗಿದೆ. ಬೆಂಗಳೂರಿನ ಪಕ್ಷದ ಕಚೇರಿ ‘ಜಗನ್ನಾಥ ಭವನ’ದಲ್ಲಿ ನಡೆದ ಹೈವೋಲ್ಟೇಜ್ ಕೋರ್ ಕಮಿಟಿ ಸಭೆಯು ಕೇವಲ ಅಭ್ಯರ್ಥಿಗಳ ಚರ್ಚೆಗೆ ಸೀಮಿತವಾಗದೆ, ಪಕ್ಷದ ಒಳಗಿನ ಭಿನ್ನಮತ ಶಮನಗೊಳಿಸುವ ‘ಡೆಮೇಜ್ ಕಂಟ್ರೋಲ್’ ಸಭೆಯಾಗಿಯೂ ಗಮನ ಸೆಳೆದಿದೆ.
ದಾವಣಗೆರೆಯಲ್ಲಿ ‘ಸಿದ್ದೇಶ್ವರ್ ತಂಡ’ದ ಅಸಮಾಧಾನ: ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್ ಮತ್ತು ಬೆಂಬಲಿಗರು ಬಿ.ಎಸ್. ಯಡಿಯೂರಪ್ಪ ಅವರ ಕೆಲವು ನಿರ್ಧಾರಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ ಹಾಗಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಗೋವಿಂದ ಕಾರಜೋಳ ಅವರ ಸಮ್ಮುಖದಲ್ಲಿ ಅಸಮಾಧಾನಿತ ನಾಯಕರನ್ನು ಒಟ್ಟಾಗಿ ಕೂರಿಸಿ, “ಹಳೆಯದನ್ನು ಮರೆತು ಪಕ್ಷದ ಹಿತದೃಷ್ಟಿಯಿಂದ ಕೆಲಸ ಮಾಡಿ” ಎಂಬ ಖಡಕ್ ಸಂದೇಶ ರವಾನಿಸಲಾಗಿದೆ ಎನ್ನಲಾಗಿದೆ.
ಜೆಡಿಎಸ್ ಮೈತ್ರಿ ಮತ್ತು ಮಹಿಮಾ ಪಟೇಲ್ ಫ್ಯಾಕ್ಟರ್: ದಾವಣಗೆರೆ ದಕ್ಷಿಣದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಹಿಮಾ ಪಟೇಲ್ ಅವರು ಟಿಕೆಟ್ ಪಡೆಯಲು ನಿತೀಶ್ ಕುಮಾರ್ ಮೂಲಕ ಲಾಬಿ ನಡೆಸುತ್ತಿದ್ದಾರೆ ಎಂಬ ಸುದ್ದಿಯೂ ಸಭೆಯಲ್ಲಿ ಚರ್ಚೆಯಾಗಿದೆ. ಆದರೆ, ಸ್ಥಳೀಯ ಬಿಜೆಪಿ ನಾಯಕರು ಕಮಲದ ಗುರುತಿನಡಿ ಸ್ಪರ್ಧಿಸುವ ಅಭ್ಯರ್ಥಿಗೇ ಆದ್ಯತೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ ಎಂದು ತಿಳಿದುಬಂದಿದೆ.
ಬಾಗಲಕೋಟೆಯಲ್ಲಿ ಚರಂತಿಮಠ ಫೇವರೇಟ್?: ಬಾಗಲಕೋಟೆ ಕ್ಷೇತ್ರದಲ್ಲಿ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರ ಹೆಸರು ಮುಂಚೂಣಿಯಲ್ಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಾಂಗ್ರೆಸ್ನಿಂದ ಎಚ್.ವೈ. ಮೇಟಿ ಅವರ ಕುಟುಂಬದವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇರುವುದರಿಂದ, ಪ್ರಬಲ ಪೈಪೋಟಿ ನೀಡಲು ಚರಂತಿಮಠ ಅವರನ್ನೇ ಕಣಕ್ಕಿಳಿಸಲು ಪಕ್ಷ ಒಲವು ತೋರಿದೆ ಎನ್ನಲಾಗಿದೆ.
ದೆಹಲಿ ಅಂಗಳಕ್ಕೆ ಆಕಾಂಕ್ಷಿಗಳ ಪಟ್ಟಿ:
ಸಭೆಯ ಬಳಿಕ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಎರಡು ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಅಂತಿಮ ಮುದ್ರೆಗಾಗಿ ಇಂದು ಅಥವಾ ನಾಳೆ ದೆಹಲಿಯ ವರಿಷ್ಠರಿಗೆ ರವಾನಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ಮೂಲಗಳ ಪ್ರಕಾರ, ಪ್ರತಿ ಕ್ಷೇತ್ರಕ್ಕೆ ಮೂವರ ಹೆಸರನ್ನು ಒಳಗೊಂಡ ‘ಪ್ಯಾನಲ್’ ಸಿದ್ಧಪಡಿಸಲಾಗಿದ್ದು, ಇದರಲ್ಲಿ ಸಾಮಾಜಿಕ ಸಮೀಕರಣ ಹಾಗೂ ಗೆಲುವಿನ ಸಾಧ್ಯತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ತಿಳಿಸುಬಂದಿದೆ. ಇನ್ನು ದಾವಣಗೆರೆ ಅಸಮಧಾನ ಕುರಿತು “ನಾಲ್ಕು ಗೋಡೆಗಳ ಮಧ್ಯೆ ನಡೆಯಬೇಕಾದ ಚರ್ಚೆ ನಡೆದಿದೆ, ಎಲ್ಲವೂ ಸರಿಹೋಗುವ ವಿಶ್ವಾಸವಿದೆ” ಎಂದರು.
ವರಿಷ್ಠರ ನಿರ್ಧಾರವೇ ಅಂತಿಮ:
ವಿಧಾನಪರಿಷತ್ ಚುನಾವಣೆಗೂ ಅಭ್ಯರ್ಥಿಗಳ ಘೋಷಣೆಯಾಗಿರುವುದರಿಂದ, ವಿಧಾನಸಭೆ ಉಪಚುನಾವಣೆಯಲ್ಲೂ ಅಚ್ಚರಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹೈಕಮಾಂಡ್ ಯಾವ ‘ಸರ್ಪ್ರೈಸ್’ ನೀಡಲಿದೆ ಎಂಬುದು ಈಗ ಕಾರ್ಯಕರ್ತರ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.

