Wed. Mar 11th, 2026

ಕೈತಪ್ಪಿದ ಪಶ್ಚಿಮ ಪದವೀಧರ ಕ್ಷೇತ್ರದ ಟಿಕೆಟ್: ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ರಾಜೀನಾಮೆ

Share this with Friends

ಹುಬ್ಬಳ್ಳಿ/ಬೆಂಗಳೂರು: ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಗೊಂಡಿರುವ ರಾಜ್ಯ ಬಿಜೆಪಿ ಶಿಸ್ತು ಸಮಿತಿಯ ಅಧ್ಯಕ್ಷ ಲಿಂಗರಾಜ ಪಾಟೀಲ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕಳೆದ 37 ವರ್ಷಗಳಿಂದ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿ, ಸಂಘಟನೆಯ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಬಂದಿದ್ದ ಪಾಟೀಲ ಅವರು, ಈ ಬಾರಿ ಪಶ್ಚಿಮ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷದ ಹಿರಿಯ ನಾಯಕತ್ವವು ತಮ್ಮ ಸುದೀರ್ಘ ಸೇವೆಯನ್ನು ಪರಿಗಣಿಸದೆ ಟಿಕೆಟ್ ನಿರಾಕರಿಸಿರುವುದು ಅವರಿಗೆ ತೀವ್ರ ನೋವುಂಟು ಮಾಡಿದೆ ಎನ್ನಲಾಗಿದೆ.

ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ, “ಪಕ್ಷಕ್ಕಾಗಿ ದಶಕಗಳ ಕಾಲ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಈ ಬಾರಿ ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸಲು ಅವಕಾಶ ಸಿಗುವ ವಿಶ್ವಾಸವಿತ್ತು. ಆದರೆ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿರುವುದು ಕೇವಲ ನನಗಷ್ಟೇ ಅಲ್ಲ, ರಾಜ್ಯದ ಹಿರಿಯ ಕಾರ್ಯಕರ್ತರಿಗೆ ಮಾಡಿದ ಅನ್ಯಾಯ,” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಪಶ್ಚಿಮ ಪದವೀಧರ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರದಲ್ಲಿ ಹಿರಿಯ ಹಾಗೂ ಸಂಘಟನಾ ಹಿನ್ನೆಲೆಯುಳ್ಳವರಿಗೆ ಆದ್ಯತೆ ನೀಡಬೇಕೆಂದು ಒತ್ತಾಯ ಕೇಳಿಬಂದಿತ್ತು. ಈಗ ಲಿಂಗರಾಜ ಪಾಟೀಲ ಅವರ ರಾಜೀನಾಮೆಯು ಪಕ್ಷದ ಆಂತರಿಕ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದು, ವರಿಷ್ಠರು ಇದನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

 


Share this with Friends

Related Post