Fri. Mar 6th, 2026

ಪ್ರಧಾನಿ ಮೋದಿ ಫೋಟೋ ದುರ್ಬಳಕೆ ಆರೋಪ: ಯುವ ಕಾಂಗ್ರೆಸ್ ವಿರುದ್ಧ ಬಿಜೆಪಿ ದೂರು

Share this with Friends

ಬೆಂಗಳೂರು: ರಾಜ್ಯದ ಆಡಳಿತ ಶಕ್ತಿ ಕೇಂದ್ರವಾಗಿರುವ ವಿಧಾನಸೌಧದ ಮುಂದೆ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವಿರುವ ಆಕ್ಷೇಪಾರ್ಹ ಬ್ಯಾನರ್ ಅಳವಡಿಸಿ, ಸುಳ್ಳು ಮಾಹಿತಿ ಹರಡಲಾಗುತ್ತಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಕೆ ಮಾಡಿದ್ದಾರೆ.

ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಕಚೇರಿಗೆ ಭೇಟಿ ನೀಡಿದ ಬಿಜೆಪಿ ಶಾಸಕ ಸಿ.ಕೆ. ರಾಮಮೂರ್ತಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಮತ್ತು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿಗೌಡ ಅವರನ್ನೊಳಗೊಂಡ ನಿಯೋಗವು ದೂರು ನೀಡಿದೆ. “ಯುವ ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ಪ್ರಧಾನಿಯವರ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಮತ್ತು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸಲು ಇಂತಹ ಪೋಸ್ಟರ್‌ಗಳನ್ನು ಬಳಸುತ್ತಿದೆ. ಇದು ಕೇಂದ್ರ ಸರ್ಕಾರದ ವಿರುದ್ಧ ಜನರನ್ನು ಪ್ರಚೋದಿಸುವ ಸಂಚು” ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

 ಫೆಬ್ರವರಿ 8ರ ಭಾನುವಾರದಂದು ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಮತ್ತು ವಿಧಾನಸೌಧದ ಮುಂಭಾಗದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ಈ ಬ್ಯಾನರ್‌ಗಳಲ್ಲಿ ಪ್ರಧಾನಿ ಮೋದಿ ಅವರು ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ವಿಷಯದಲ್ಲಿ “ಶರಣಾಗಿದ್ದಾರೆ” ಎಂದು ಆರೋಪಿಸಲಾಗಿತ್ತು. ಅಲ್ಲದೆ, “ಸಂಸತ್ತಿಗೆ ಬರಲು ಧೈರ್ಯವಿಲ್ಲದ ಪ್ರಧಾನಿ ದೇಶವನ್ನು ಹೇಗೆ ರಕ್ಷಿಸುತ್ತಾರೆ?” ಎಂಬ ವಿವಾದಾತ್ಮಕ ಬರಹಗಳಿದ್ದವು ಎಂದು ಬಿಜೆಪಿ ತನ್ನ ದೂರಿನಲ್ಲಿ ತಿಳಿಸಿದೆ.

ಪೊಲೀಸ್ ಕ್ರಮ:

ಮೆಖ್ರಿ ಸರ್ಕಲ್ ಸೇರಿದಂತೆ ವಿವಿಧೆಡೆ ಅಳವಡಿಸಲಾಗಿದ್ದ ಅಕ್ರಮ ಬ್ಯಾನರ್‌ಗಳನ್ನು ಪೊಲೀಸರು ಈಗಾಗಲೇ ತೆರವುಗೊಳಿಸಿದ್ದಾರೆ. ಅನುಮತಿ ಇಲ್ಲದೆ ಬ್ಯಾನರ್ ಅಳವಡಿಸಿ ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪದ ಮೇಲೆ ಪ್ರತಿಭಟನಾಕಾರರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.


Share this with Friends

Related Post