ಬೆಂಗಳೂರು: ರಾಜ್ಯ ಸರ್ಕಾರದ 2026-27ನೇ ಸಾಲಿನ ಬಜೆಟ್ನಲ್ಲಿನ ಲೋಪದೋಷಗಳನ್ನು ಸದನದಲ್ಲಿ ಸಮರ್ಥವಾಗಿ ಎತ್ತಿಹಿಡಿಯಲು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸಜ್ಜಾಗಿವೆ. ಸೋಮವಾರ ವಿಧಾನಸೌಧದಲ್ಲಿ ಉಭಯ ಪಕ್ಷಗಳ ವಿಧಾನ ಪರಿಷತ್ ಸದಸ್ಯರ ಮಹತ್ವದ ಜಂಟಿ ಸಮಾಲೋಚನಾ ಸಭೆ ನಡೆಯಿತು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ, ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಸರ್ಕಾರವನ್ನು ಕಿರಚುವ ಕುರಿತು ತಂತ್ರ ರೂಪಿಸಲಾಯಿತು. ದೆಹಲಿಯ ಪ್ರತಿಷ್ಠಿತ ‘ಪಿಆರ್ಎಸ್ ಲೆಜಿಸ್ಲೇಟಿವ್ ರಿಸರ್ಚ್’ (PRS Legislative Research) ತಂಡದ ತಜ್ಞರು ಈ ವೇಳೆ ಬಜೆಟ್ನ ಅಂಕಿಅಂಶಗಳು, ಇಲಾಖಾವಾರು ಹಂಚಿಕೆ ಹಾಗೂ ರಾಜ್ಯದ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಸದಸ್ಯರಿಗೆ ಸಮಗ್ರ ವಿಶ್ಲೇಷಣೆ ನೀಡಿದರು.
ಬಜೆಟ್ನಲ್ಲಿನ ತಾಂತ್ರಿಕ ಅಂಶಗಳು ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗುವ ವಿಚಾರಗಳನ್ನು ಸದನದಲ್ಲಿ ಹೇಗೆ ಪ್ರಸ್ತಾಪಿಸಬೇಕು ಎಂಬ ಬಗ್ಗೆ ಶಾಸಕರಿಗೆ ಮಾರ್ಗದರ್ಶನ ನೀಡಲಾಯಿತು. ಬಜೆಟ್ನಲ್ಲಿ ಕಂಡುಬಂದಿರುವ ಅನುದಾನ ಹಂಚಿಕೆಯ ತಾರತಮ್ಯ ಹಾಗೂ ಜನವಿರೋಧಿ ನೀತಿಗಳ ವಿರುದ್ಧ ಉಭಯ ಪಕ್ಷಗಳು ಒಗ್ಗಟ್ಟಿನ ಹೋರಾಟ ನಡೆಸಲು ಈ ಸಭೆಯಲ್ಲಿ ನಿರ್ಧರಿಸಲಾಗಿದೆ.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರು ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್ನ ಪ್ರಮುಖ ನಾಯಕರು ಹಾಗೂ ಸದಸ್ಯರು ಈ ಸಮಾಲೋಚನೆಯಲ್ಲಿ ಪಾಲ್ಗೊಂಡಿದ್ದರು. ಮುಂಬರುವ ಅಧಿವೇಶನದಲ್ಲಿ ಸರ್ಕಾರದ ಬಜೆಟ್ ಮೇಲಿನ ಚರ್ಚೆಯನ್ನು ಹೆಚ್ಚು ತಾರ್ಕಿಕವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಸಲು ಈ ಸಭೆ ವೇದಿಕೆಯಾಯಿತು.

