ಮಡಿಕೇರಿ,ಏ.14: ಕರ್ನಾಟಕದಲ್ಲಿ 2018 ರಲ್ಲಿ 600 ಭರವಸೆಗಳನ್ನು ಕೊಟ್ಟ ಬಿಜೆಪಿ 60 ಭರವಸೆಗಳನ್ನೂ ಈಡೇರಿಸಿಲ್ಲ, ಮುಂದೆಯೂ ಈಡೇರಿಸುವುದಿಲ್ಲ ಎಂಡು ಸಿಎಂ ಸಿದ್ದರಾಮಯ್ಯ ಟೀಕಿಸಿದರು.
ಮಾಧ್ಯಮ ದವರೊಂದಿಗೆ ಮಾತನಾಡಿದ ಸಿಎಂ,ಬಿಜೆಪಿ ಪ್ರಣಾಳಿಕೆಯಲ್ಲಿ ಬಡ ಕುಟುಂಬಗಳಿಗೆ ಕಡಿಮೆ ಬೆಲೆಗೆ ಗ್ಯಾಸ್, ಯುವಶಕ್ತಿ, ನಾರಿಶಕ್ತಿ, ಉದ್ಯೋಗ ಸೃಷ್ಟಿ ಘೋಷಿಸಲಾಗಿದೆ, ಈ ಮೊದಲೇ ಮಾಡಿರುವ ಘೋಷಣೆಗಳ ಬಗ್ಗೆ ಚರ್ಚೆಯಾಗಬೇಕು ಎಂದು ಹೇಳಿದರು.
ವಿದೇಶಗಳಿಂದ ಕಪ್ಪುಹಣ ತಂದು 15 ಲಕ್ಷ ರೂಪಾಯಿ ತಂದುಕೊಟ್ಟರೇ, 2ಕೋಟಿ ಉದ್ಯೋಗ ಸೃಷ್ಟಿ, ರೈತರ ಆದಾಯ ದುಪ್ಪಟ್ಟು ಮಾಡಿದರೇ, ಮೆಕ್ ಇನ್ ಇಂಡಿಯಾ , ಅಚ್ಚೇ ದಿನ್ ಆಯೇಗಾ ಎಂದು ಹೇಳಿದ್ದರು,ಆಹಾರ ಪದಾರ್ಥಗಳ ಬೆಲೆ ಕಡಿಮೆಯಾಯಿತೇ ಎಂದು ಕಾರವಾಗಿ ಪ್ರಶ್ನಿಸಿದರು.
10 ವರ್ಷಗಳಲ್ಲಿ ಪ್ರಧಾನಮಂತ್ರಿಯಾಗಿ ಏನು ಮಾಡಿದ್ದಾರೆ ಎಂದು ಮೊದಲು ಹೇಳಬೇಕು. ಅದರ ಅವಲೋಕನ ಆದ ನಂತರ ಮುಂದಿನದ್ದು ಹೇಳಬೇಕು. ಬಿಜೆಪಿ ಸರ್ಕಾರ 25 ಕೋಟಿ ಉದ್ಯೋಗ ಸೃಷ್ಟಿಸಿದ್ದಾರೆ ಎಂದು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. 25 ಕೋಟಿ ಉದ್ಯೋಗ ಯಾರಿಗೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.
ಶ್ರೀನಿವಾಸ್ ಪ್ರಸಾದ್ ಅವರ ಮನೆಗೆ ಸೋಲುವ ಭಯದಿಂದ ಸಿಎಂ ಭೇಟಿ ನೀಡಿದ್ದಾರೆ ಎಂಬ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದು, ನಾನು ಶ್ರೀನಿವಾಸ ಪ್ರಸಾದ್ ರಾಜಕೀಯದಲ್ಲಿ ಸಮಕಾಲೀನರು. ಅವರು 74ರಲ್ಲಿಯೇ ವಿಧಾನಸಭೆಗೆ ಸ್ಪರ್ಧಿಸಿದ್ದರು, ಒಟ್ಟಿಗೆ ರಾಜಕಾರಣದಲ್ಲಿದ್ದೆವು,ದೀರ್ಘ ಕಾಲದ ಸ್ನೇಹಿತ. ಅವರು ರಾಜಕೀಯದಿಂದ ನಿವೃತ್ತರಾಗಿ ಯಾವ ಪಕ್ಷಕ್ಕೂ ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದಾರೆ. ಇಂಥ ಸಂದರ್ಭದಲ್ಲಿ ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿದ್ದೇನೆ ಅಷ್ಟೇ ಮತ್ತೇನಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಿಂದಾಗಿ ಹೆಣ್ಣುಮಕ್ಕಳು ದಾರಿತಪ್ಪಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಹೇಳಿರುವ ಕುರಿತು ಮಾತನಾಡಿದ ಸಿದ್ದರಾಮಯ್ಯ, ಅವರ ಮನಸ್ಥಿತಿ ಅರ್ಥಮಾಡಿಕೊಳ್ಳಬೇಕು ದಾರಿತಪ್ಪಿದ್ದಾರೆ ಎಂದರೇನರ್ಥ ಅವರ ಹೇಳಿಕೆಯಿಂದ ಹೆಣ್ಣುಮಕ್ಕಳ ಬಗ್ಗೆ ಅವರಿಗಿರುವ ಭಾವನೆ ಏನು ಎಂದು ಅರ್ಥವಾಗುತ್ತದೆ,2 ಬಾರಿ ಮುಖ್ಯಮಂತ್ರಿಯಾಗಿದ್ದರು ಈ ರೀತಿ ಮಾತನಾಡಿದರೆ ಜನ ಸಹಿಸುತ್ತಾರೆಯೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ವಿದ್ಯುತ್, ಮದ್ಯ, ಬಸ್, ಸ್ಟಾಂಪ್ ಪೇಪರ್ ಬೆಲೆ ಹೆಚ್ಚು ಮಾಡಿ ಗ್ಯಾರಂಟಿ ಕೊಡುತ್ತಿದ್ದಾರೆ ಎಂದು ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿ ಅದಕ್ಕೆಲ್ಲ ಎಷ್ಟು ದುಡ್ಡು ಬರುತ್ತದೆ ಎಂದು ವಿಜಯೇಂದ್ರ ಅವರಿಗೆ ತಿಳಿದಿದೆಯೇ, ಗ್ಯಾರಂಟಿ ಯೋಜನೆಗಳಿಗಾಗಿ ಒಂದು ವರ್ಷಕ್ಕೆ 56,000 ಕೋಟಿ ರೂ ಅಗತ್ಯವಿದೆ, ಅವುಗಳಿಂದ ಅಷ್ಟು ಹಣ ಬರುತ್ತದೆಯೇ ಎಂದು ಪ್ರಶ್ನಿಸಿದರು.