ಬೆಂಗಳೂರು,ಫೆ.7: ಅತ್ತ ದೆಹಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದರೆ ಇತ್ತ ಬೆಂಗಳೂರಿನಲ್ಲಿ ಬಿಜೆಪಿ ಕೂಡಾ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟಿಸಿತು.
ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಬಿಜೆಪಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾಜಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ,ಕರ್ನಾಟಕದ ಇತಿಹಾಸದಲ್ಲಿ ಇಷ್ಟು ದೊಡ್ಡ ನಾಟಕ ಮಾಡುವ ಸರ್ಕಾರ ಇನ್ನೊಂದಿಲ್ಲ ಎಂದು ಟೀಕಿಸಿದರು.
ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿಯಾದ ಮೇಲೆ ತಮ್ಮ ತತ್ವ ಸಿದ್ದಾಂತ ಗಾಳಿಗೆ ತೂರಿ ತಮ್ಮ ಸ್ಥಾನ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಆರಂಭವಾಗಿಲ್ಲ. ಬರಪರಿರಿಹಾರ ನೀಡಿಲ್ಲ, ಯಾವ ನೈತಿಕತೆ ಇಟ್ಟುಕೊಂಡು ದೆಹಲಿಯಲ್ಲಿ ಪ್ರತಿಭಟನೆ ಮಾಡಿದ್ದಾರೊ ನಾಚಿಕೆಯಾಗಬೇಕು ಕಾಂಗ್ರೆಸ್ ನವರಿಗೆ ಎಂದು ಗುಡುಗಿದರು.
ಸಿದ್ದರಾಮಯ್ಯ ಅವರು ಯುಪಿಎ ಸರ್ಕಾರದಲ್ಲಿ ರಾಜ್ಯಕ್ಕೆ ಎಷ್ಟು ಅನುದಾನ ಬಂದಿದೆ, ಎನ್ ಡಿಎ ಅವಧಿಯಲ್ಲಿ ಎಷ್ಟು ಬಂದಿದೆ ಹೇಳಲಿ ಎಂದು ಒತ್ತಾಯಿಸಿದರು.
ಯುಪಿಎ ಅವಧಿಯಲ್ಲಿ 82 ಸಾವಿರ ಕೋಟಿ ಮಾತ್ರ ಬಂದಿದೆ. ಮೋದಿ ಕಲಾದಲ್ಲಿ 2.82 ಲಕ್ಷ ಕೋಟಿ ಬಂದಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
15 ನೇ ಹಣಕಾಸು ಆಯೋಗ ರಾಜ್ಯಕ್ಕೆ ಭೇಟಿ ನೀಡಿದಾಗ ಸಿದ್ದರಾಮಯ್ಯ ಅವರ ಸರ್ಕಾರ ಇತ್ತು. ಆಗ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ತಿಳಿಸಲು ಅವರು ವಿಫಲವಾಗಿದ್ದಾರೆ ರಾಜ್ಯದ ಪಾಲು ಶೇ.4.7ರಿಂದ 3.6ಗೆ ಕಡಿಮೆಯಾಗಲು ಸಿದ್ದರಾಮಯ್ಯ ಅವರೆ ಕಾರಣ ಎಂದು ಗಂಭೀರ ಆರೋಪ ಮಾಡಿದರು.
ಕೃಷ್ಣಾ 3ನೇ ಹಂತದ ಯೊಜನೆಗೆ ನಾವು ಚಾಲನೆ ಕೊಟ್ಡಿದ್ದೇವೆ. ಅದನ್ನು ಸಿದ್ದರಾಮಯ್ಯ ಮುಂದುವರೆಸಿಲ್ಲ. ಭದ್ರ ಯೋಜನೆ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಕಾವೇರಿ ಕೊಳ್ಳದ ಯೋಜನೆಗಳು ಸ್ಥಗಿತವಾಗಿವೆ ಎಂದು ಕಿಡಿಕಾರಿದರು.
ಶಾಸಕರ ಅನುದಾನ ಕೂಡ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್ ಶಾಸಕರಿಗೂ ಅನ್ಯಾಯ ಮಾಡುತ್ತಿದ್ದಾರೆ. ಖಜಾನೆ ತುಂಬಿದ್ದರೆ ರೈತರಿಗೆ ಬರ ಪರಿಹಾರ ಕೊಡಿ ಎಂದು ಬೊಮ್ಮಾಯಿ ಸವಾಲು ಹಾಕಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮಾತನಾಡಿ,ಕಾಂಗ್ರೆಸ್ ಸುಳ್ಳು ಭರವಸೆ ಕೊಟ್ಟು, ನಾಟಕ ಮಾಡಿ ಅಧಿಕಾರಕ್ಕೆ ಬಂದಿದೆ. ಈಗ ಈ ಗ್ಯಾರಂಟಿಯನ್ನು ಪೂರ್ಣ ಜಾರಿ ಮಾಡದೇ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ ಎಂದು ಟೀಕಿಸಿದರು.
ಆರ್.ಅಶೋಕ್, ಬಸವರಾಜ ಬೊಮ್ಮಾಯಿ,ಬಿ.ವೈ.ವಿಜಯೇಂದ್ರ ಸೇರಿದಂತೆ ಬಿಜೆಪಿ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.