ಬೆಂಗಳೂರು, ಮಾ.9: ಬರಗಾಲ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸದ ಸರ್ಕಾರದ ವಿರುದ್ಧ ಇದೇ ಸೋಮವಾರ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಪ್ರತಿಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದರು.
ಬೆಂಗಳೂರಿನಲ್ಲಿ ಬಿಜೆಪಿ ಪ್ರಣಾಳಿಕೆ ಸಲಹಾ ಪತ್ರ ಉದ್ಘಾಟನೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಹಾಹಾಕಾರ ಆರಂಭವಾಗಿದ್ದರೂ ಕಾಂಗ್ರೆಸ್ ಸರ್ಕಾರ ಕುಂಭಕರ್ಣನ ನಿದ್ರೆ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಜಾಗತಿಕ ಮಟ್ಟದಲ್ಲಿ ಬೆಂಗಳೂರಿನ ಮಾನವನ್ನು ಸರ್ಕಾರ ಹರಾಜು ಹಾಕಿದೆ. ಬರಗಾಲದ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸದ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತೇವೆ ಎಂದರು.
ಕಾಂಗ್ರೆಸ್ ಸರ್ಕಾರದಲ್ಲಿ ಹಣ ಕೊರತೆಯಾಗಿರುವುದರಿಂದ ಬರ ಘೋಷಣೆ ಮಾಡಲು ತಡ ಮಾಡಿದೆ,ಜೊತೆಗೆ ಪರಿಹಾರ ನೀಡುವುದನ್ನು ಮುಂದೂಡಿದ್ದಾರೆ.
ಹಳ್ಳಿಗಳಲ್ಲಿ ಜನರು ವಲಸೆ ಹೋಗುತ್ತಿದ್ದಾರೆ, ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಆರಂಭವಾಗಿದೆ, ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮಗಳಲ್ಲೂ ಈ ಕುರಿತು ಸುದ್ದಿಗಳು ಬರುತ್ತಿವೆ,ಇದರಿಂದ ಜಾಗತಿಕ ಮಟ್ಟದಲ್ಲಿ ಬೆಂಗಳೂರಿನ ಮಾನ ಮರ್ಯಾದೆಯನ್ನು ಸರ್ಕಾರ ಹರಾಜು ಹಾಕಿದೆ ಎಂದು ಗುಡುಗಿದರು.
ಬೆಂಗಳೂರಿಗೆ ಐಟಿ ಸಿಟಿ, ಬಿಟಿ ಸಿಟಿ ಎಂಬ ಹೆಸರಿದ್ದು, ಎಲ್ಲ ದೇಶಗಳಿಂದ ಜನರು ಇಲ್ಲಿಗೆ ಬರುತ್ತಾರೆ. ಕಾವೇರಿ ನೀರನ್ನು ಮೈತ್ರಿಕೂಟದ ಸದಸ್ಯರಾದ ತಮಿಳುನಾಡಿನ ಸಿಎಂಗೆ ಕೊಟ್ಟಿದ್ದಾರೆ. ಬೆಂಗಳೂರಲ್ಲಿ ಶೇ.60 ರಷ್ಟು ಬೋರ್‌ವೆಲ್ ಖಾಲಿಯಾಗಿದೆ, ಬೆಂಗಳೂರಿನಲ್ಲಿ ಲಂಗು ಲಗಾಮಿಲ್ಲದೆ ಟ್ಯಾಂಕರ್‌ಗಳು ಓಡಾಡುತ್ತಿದೆ. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ತರಾಟೆಗೆ ತೆಗೆದುಕೊಂಡರು ಅಶೋಕ್.
ಎಲ್ಲಿ ನೋಡಿದರೂ ಎಣ್ಣೆ ಅಂಗಡಿಗಳು ತೆರೆದಿರುತ್ತವೆ. ಆದರೆ ಶುದ್ಧ ಕುಡಿಯುವ ನೀರಿನ ಘಟಕಗಳು ಮುಚ್ಚಿವೆ. ರಾಜ್ಯದಲ್ಲಿ ಬೀರ್ ಇದೆ, ನೀರಿಲ್ಲ ಎಂಬ ಸ್ಥಿತಿಯನ್ನು ಸರ್ಕಾರ ಸೃಷ್ಟಿಸಿದೆ ಎಂದು ಆರ್.ಅಶೋಕ್ ವ್ಯಂಗ್ಯವಾಡಿದರು.