ಬೆಂಗಳೂರು: ದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಎಐ (AI) ಶೃಂಗಸಭೆಯ ವೇಳೆ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾ ಶನಿವಾರ ನಗರದ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಮುಖಂಡರನ್ನು ವಶಕ್ಕೆ ಪಡೆದರು.
ಫ್ರೀಡಂ ಪಾರ್ಕ್ ನಲ್ಲಿ ನಡೆಸ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಧೀರಜ್ ಮುನಿರಾಜು ಮಾತನಾಡಿ, “ಅಂತಾರಾಷ್ಟ್ರೀಯ ವೇದಿಕೆಯಲ್ಲಿ ವಿದೇಶಿ ಗಣ್ಯರ ಸಮ್ಮುಖದಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಅರೆಬೆತ್ತಲೆ ಪ್ರದರ್ಶನ ನೀಡಿರುವುದು ದೇಶದ ಘನತೆಗೆ ತಂದ ದೊಡ್ಡ ಅಪಮಾನ. ಕಾಂಗ್ರೆಸ್ ಸಂಸ್ಕೃತಿ ಎಂತಹದ್ದು ಎಂಬುದು ಇದರಿಂದ ಸಾಬೀತಾಗಿದೆ,” ಎಂದು ಆಕ್ರೋಶ ಹೊರಹಾಕಿದರು.ಯುವ ಕಾಂಗ್ರೆಸ್ಸಿಗರು ತಮ್ಮ ವರ್ತನೆಗೆ ಬೇಷರತ್ ಕ್ಷಮೆ ಕೇಳಲಿ ಎಂದು ಆಗ್ರಹಿಸಿದರು.
ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ ಮಾತನಾಡಿ, ಎಐ ಶೃಂಗಸಭೆಯಲ್ಲಿ 30- 35 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದು, ಭಾರತಕ್ಕೆ ಅವಮಾನವಾಗುವ ರೀತಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಅರೆ ಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ. ಇದು ಖಂಡನೀಯ.ಭಾರತದಲ್ಲಿ ಉತ್ತಮ ಆವಿಷ್ಕಾರ ನಡೆಯುತ್ತಿದೆ. ಈ ಸಂದರ್ಭದಲ್ಲಿ ಪ್ರಧಾನಿಯವರಿಗೂ ಧಿಕ್ಕಾರ ಕೂಗಿದ ಯುವ ಕಾಂಗ್ರೆಸ್ಸಿಗರ ವರ್ತನೆ ಅನಪೇಕ್ಷಣೀಯಇವರ ವರ್ತನೆಯನ್ನು ಖಂಡಿಸಿ ಸಾರ್ವಜನಿಕರೂ ಒದೆ- ಗೂಸಾ ಕೊಟ್ಟಿದ್ದಾರೆ ಎಂದು ಗಮನ ಸೆಳೆದರು. ಇದನ್ನು ಖಂಡಿಸಿ ಕೆಪಿಸಿಸಿ ಕಚೇರಿಗೂ ಮುತ್ತಿಗೆ ಹಾಕುವುದಾಗಿ ಹೇಳಿದರು.
ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಅವರು ಮಾತನಾಡಿ, ಕಾಂಗ್ರೆಸ್ಸಿನವರು ಎಲ್ಲ ಕಾರ್ಯಕ್ರಮ, ಯೋಜನೆಗಳಿಗೆ ತಮ್ಮ ನಾಯಕರಾದ ನೆಹರೂ, ಇಂದಿರಾ, ರಾಜೀವ್ ಗಾಂಧಿಯವರ ಹೆಸರು ಇಟ್ಟುಕೊಂಡಿದ್ದಾರೆ ಎಂದು ಆಕ್ಷೇಪಿಸಿದರು. ನಮ್ಮ ಪ್ರಧಾನಿ ಮೋದಿ ಅವರು ಯಾವುದೇ ಒಂದು ಯೋಜನೆಗೂ ತಮ್ಮ ಹೆಸರನ್ನು ಇಟ್ಟುಕೊಂಡಿಲ್ಲ ಎಂದು ಗಮನ ಸೆಳೆದರು. ದೇಶದ ಮಾನ ಕಳೆಯುವಂತೆ ನಿನ್ನೆ ನಡೆದ ಘಟನೆ ಅತ್ಯಂತ ಖಂಡನೀಯ ಎಂದು ಟೀಕಿಸಿದರು.
ಬಿಗುವಿನ ವಾತಾವರಣ:
ಫ್ರೀಡಂ ಪಾರ್ಕ್ ಆವರಣದಲ್ಲಿ ಜಮಾಯಿಸಿದ್ದ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಬ್ಯಾರಿಕೇಡ್ಗಳನ್ನು ದಾಟಿ ಮುಂದೆ ಸಾಗಲು ಯತ್ನಿಸಿದಾಗ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ತೀವ್ರ ತಳ್ಳಾಟ-ನೂಕಾಟ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆಯಲು ಪೊಲೀಸರು ಪ್ರತಿಭಟನಾಕಾರರನ್ನು ಬಲವಂತವಾಗಿ ಬಸ್ಗಳಿಗೆ ಹತ್ತಿಸಿ ವಶಕ್ಕೆ ಪಡೆದರು.
ಪ್ರಮುಖರ ಭಾಗಿ:
ಶಾಸಕ ಸಪ್ತಗಿರಿ ಗೌಡ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ. ರಾಮಮೂರ್ತಿ ಸೇರಿದಂತೆ ಹಲವು ಹಿರಿಯ ನಾಯಕರು ಈ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಅವರು ಈ ಘಟನೆಗೆ ಬೇಷರತ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಲಾಯಿತು.
ಘಟನೆಯ ಹಿನ್ನೆಲೆಯಲ್ಲಿ ಮಧ್ಯಾಹ್ನದವರೆಗೆ ಮೆಜೆಸ್ಟಿಕ್ ಮತ್ತು ಆನಂದ್ ರಾವ್ ವೃತ್ತದ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಫ್ರೀಡಂ ಪಾರ್ಕ್ ಸುತ್ತಮುತ್ತ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

