Fri. Mar 6th, 2026

ಸಾರಿಗೆ ನೌಕರರ ಹೋರಾಟಕ್ಕೆ ಬಿಜೆಪಿ ಬೆಂಬಲ: ಮುಖ್ಯಮಂತ್ರಿಗಳಿಗೆ ಬಿ.ವೈ. ವಿಜಯೇಂದ್ರ ಪತ್ರ

Vijayendra
Share this with Friends

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮಗಳ (KSRTC) ನೌಕರರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಕಿಡಿನುಡಿದಿರುವ ಬಿಜೆಪಿ ರಾಜ್ಯ ಘಟಕ, ಕಾರ್ಮಿಕರ ಹೋರಾಟಕ್ಕೆ ತನ್ನ ಸಂಪೂರ್ಣ ಬೆಂಬಲ ಘೋಷಿಸಿದೆ.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಸಾರಿಗೆ ಕಾರ್ಮಿಕರ ಬಾಕಿ ವೇತನವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.

ಕಳೆದ 38 ತಿಂಗಳಿಂದ ಸಾರಿಗೆ ಕಾರ್ಮಿಕರಿಗೆ ಬರಬೇಕಾದ ವೇತನದ ಹಿಂಬಾಕಿಯನ್ನು ಪಾವತಿಸದೆ ಸರ್ಕಾರ ವಿಳಂಬ ಮಾಡುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿ. 2024ರ ಜನವರಿಯಿಂದಲೇ ಜಾರಿಗೆ ಬರಬೇಕಿದ್ದ ವೇತನ ಪರಿಷ್ಕರಣೆಯನ್ನು ಜಾರಿಗೊಳಿಸದಿರುವುದು ಸರ್ಕಾರದ “ಕಾರ್ಮಿಕ ವಿರೋಧಿ ಧೋರಣೆ”ಯನ್ನು ಎತ್ತಿ ತೋರಿಸುತ್ತದೆ ಎಂದು ವಿಜಯೇಂದ್ರ ಪತ್ರದಲ್ಲಿ ಟೀಕಿಸಿದ್ದಾರೆ.

ಅಸಹಕಾರ ಚಳವಳಿಗೆ ಸಾಥ್:

ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ್ ಸಂಘಗಳ ಒಕ್ಕೂಟ ಹಮ್ಮಿಕೊಂಡಿರುವ ‘ಅಸಹಕಾರ ಚಳವಳಿ’ ಸಂಪೂರ್ಣ ನ್ಯಾಯಸಮ್ಮತವಾಗಿದೆ. ಸಾರಿಗೆ ನೌಕರರು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದು, ಅವರ ತಾಳ್ಮೆಯನ್ನು ಸರ್ಕಾರ ಪರೀಕ್ಷಿಸಬಾರದು. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಸಾರಿಗೆ ನೌಕರರ ಆರ್ಥಿಕ ಹಿತಾಸಕ್ತಿಯನ್ನು ರಕ್ಷಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಬೇಡಿಕೆಗಳೇನು?

ಕಳೆದ 38 ತಿಂಗಳಿಂದ ಬಾಕಿ ಇರುವ ವೇತನದ ಹಿಂಬಾಕಿಯನ್ನು ತಕ್ಷಣವೇ ಬಿಡುಗಡೆ ಮಾಡುವುದು.

ಜನವರಿ 1, 2024 ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆಯನ್ನು ಕೂಡಲೇ ಜಾರಿಗೆ ತರುವುದು.

ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಈಡೇರಿಸುವುದು.

ಒಂದು ವೇಳೆ ಸರ್ಕಾರ ಈ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ, ಕಾರ್ಮಿಕರ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದ್ದು, ಅದಕ್ಕೆ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಬಿಜೆಪಿ ಎಚ್ಚರಿಸಿದೆ.


Share this with Friends

Related Post