ಬೆಂಗಳೂರು: ರಾಜ್ಯ ಬಿಜೆಪಿ ವತಿಯಿಂದ ಫೆಬ್ರವರಿ 26ರಂದು ಬೆಂಗಳೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ರಾಜ್ಯದ ಎಲ್ಲ ಜಿಲ್ಲಾ ತಂಡಗಳಿಗೆ ಪ್ರಶಿಕ್ಷಣ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ತಿಳಿಸಿದ್ದಾರೆ.
ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಅಧ್ಯಕ್ಷತೆಯಲ್ಲಿ ಹಾಗೂ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಉಪಸ್ಥಿತಿಯಲ್ಲಿ ಈ ಕಾರ್ಯಾಗಾರ ನಡೆಯಲಿದೆ ಎಂದರು.
2 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರಿಗೆ ತರಬೇತಿ:
ರಾಜ್ಯದ 1,156 ಸ್ಥಳಗಳಲ್ಲಿ ಈ ಪ್ರಶಿಕ್ಷಣ ವರ್ಗಗಳು ನಡೆಯಲಿವೆ. ಪ್ರತಿ ಕೇಂದ್ರದಲ್ಲಿ ಸರಾಸರಿ 200 ಪದಾಧಿಕಾರಿಗಳು ಭಾಗವಹಿಸಲಿದ್ದು, ಒಟ್ಟಾರೆಯಾಗಿ ರಾಜ್ಯಾದ್ಯಂತ ಸುಮಾರು 2 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಪ್ರತಿ ಪ್ರಶಿಕ್ಷಣ ಜಿಲ್ಲೆಯಿಂದ ಪ್ರತ್ಯೇಕ ತಂಡಗಳನ್ನು ನಿಯೋಜಿಸಲಾಗಿದೆ.
ರಾಷ್ಟ್ರ ನಿರ್ಮಾಣವೇ ಗುರಿ:
“ಬಿಜೆಪಿ ಇತರ ಪಕ್ಷಗಳಿಗಿಂತ ಭಿನ್ನವಾಗಿದೆ. ನಮ್ಮಲ್ಲಿ ವ್ಯಕ್ತಿ ನಿರ್ಮಾಣದ ಮೂಲಕ ಸಂಘಟನೆ, ಆ ಮೂಲಕ ರಾಷ್ಟ್ರ ನಿರ್ಮಾಣ ಮಾಡುವುದು ಪ್ರಶಿಕ್ಷಣದ ಮುಖ್ಯ ಉದ್ದೇಶ,” ಎಂದು ರಾಜೀವ್ ವಿವರಿಸಿದರು. ಕಾರ್ಯಕರ್ತರಲ್ಲಿ ವೈಚಾರಿಕ ಬದ್ಧತೆ, ಪಕ್ಷದ ಇತಿಹಾಸ, ಕಾರ್ಯವೈಖರಿ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಮೂಡಿಸಲು ಒಟ್ಟು 8 ಪ್ರಮುಖ ಅಂಶಗಳ ಅಡಿಯಲ್ಲಿ ಈ ತರಬೇತಿ ನೀಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
“ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬೀನ್ ಅವರು ಫೆ. 5ರಂದು ‘ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ’ಕ್ಕೆ ಚಾಲನೆ ನೀಡಿದ್ದಾರೆ. ಅದರಂತೆ ರಾಜ್ಯದ 1,156 ಸ್ಥಳಗಳಲ್ಲಿ ತರಬೇತಿ ನಡೆಯಲಿದ್ದು, ಸುಮಾರು 2 ಲಕ್ಷಕ್ಕೂ ಅಧಿಕ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ,” ಎಂದರು.
ಹೈದರಾಬಾದ್ ಸಭೆಯ ಬೆನ್ನಲ್ಲೇ ಸಿದ್ಧತೆ:
ದಕ್ಷಿಣ ಭಾರತದ ರಾಜ್ಯಗಳಲ್ಲಿ ಪ್ರಶಿಕ್ಷಣ ಆಯೋಜಿಸುವ ಕುರಿತು ಫೆ. 18ರಂದು ಹೈದರಾಬಾದ್ನಲ್ಲಿ ಮಹತ್ವದ ಸಭೆ ನಡೆದಿದೆ. ಈ ಹಿನ್ನೆಲೆಯಲ್ಲಿ ಫೆ. 26ರಂದು ಬೆಂಗಳೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಧ್ಯಕ್ಷತೆಯಲ್ಲಿ ಹಾಗೂ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸಮ್ಮುಖದಲ್ಲಿ ರಾಜ್ಯ ಮಟ್ಟದ ಕಾರ್ಯಾಗಾರ ನಡೆಯಲಿದೆ.
4,500 ವಿಷಯ ಪ್ರಮುಖರ ನಿಯೋಜನೆ:
ಪ್ರಶಿಕ್ಷಣದ ಗುಣಮಟ್ಟ ಕಾಯ್ದುಕೊಳ್ಳಲು ರಾಜ್ಯ ಮಟ್ಟದ 7 ಪ್ರಮುಖರು ವಿಷಯಗಳನ್ನು ಮಂಡಿಸಲಿದ್ದಾರೆ. ಅಲ್ಲದೆ, ರಾಜ್ಯಾದ್ಯಂತ ನಡೆಯುವ 1,156 ವರ್ಗಗಳಿಗೆ ಪ್ರಶಿಕ್ಷಣ ನೀಡಲು ಸುಮಾರು 4,500 ವಿಷಯ ಪ್ರಮುಖರನ್ನು ಸಿದ್ಧಪಡಿಸಲಾಗಿದೆ.
“ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ಎಂಬ ಧ್ಯೇಯದೊಂದಿಗೆ ಕಾರ್ಯಕರ್ತರಲ್ಲಿ ವೈಚಾರಿಕ ಬದ್ಧತೆ, ಸಾಮಾಜಿಕ ಜವಾಬ್ದಾರಿ ಹಾಗೂ ರಾಷ್ಟ್ರೀಯ-ಅಂತರರಾಷ್ಟ್ರೀಯ ನರೇಟಿವ್ಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶ,” ಎಂದು ರಾಜೀವ್ ವಿವರಿಸಿದರು. ಸದಸ್ಯತ್ವ ಅಭಿಯಾನದಿಂದ ಹಿಡಿದು ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯವರೆಗಿನ ಸಂಘಟನಾ ಪ್ರಕ್ರಿಯೆಯೂ ಇದರ ಭಾಗವಾಗಿದೆ ಎಂದು ಅವರು ತಿಳಿಸಿದರು.

