Fri. Mar 6th, 2026

ಡಿಕೆ ಶಿವಕುಮಾರ್ ಸೇರಿ ಯಾರಿಗೂ ಬಿಜೆಪಿ ಬಾಹ್ಯ ಬೆಂಬಲ ನೀಡಲ್ಲ: ವಿಜಯೇಂದ್ರ

Share this with Friends

ಬೆಂಗಳೂರು: ಕಾಂಗ್ರೆಸ್ ನ ಆಂತರಿಕ ಕಲಹದಿಂದ ಡಿಕೆ ಶಿವಕುಮಾರ್ ಸೇರಿ ಯಾರಾದರೂ ಹೊರಬಂದು ಸರ್ಕಾರ ರಚಿಸಲು ಮುಂದಾದರೂ ಯಾರಿಗೂ ಬಾಹ್ಯ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಿಲುವು ಸ್ಪಷ್ಟವಾಗಿದೆ. ಕಾಂಗ್ರೆಸ್ ಪಕ್ಷದ ಆಂತರಿಕ ಕಚ್ಚಾಟದಲ್ಲಿ ನಮಗೆ ಆಸಕ್ತಿ ಇಲ್ಲ; ಸರಕಾರದಲ್ಲಿ ಡಿ.ಕೆ.ಶಿವಕುಮಾರ್ ಆಗಲೀ, ಮತ್ಯಾರಾದರೂ ಹೊರಗೆ ಬಂದರೆ ಅವರಿಗೆ ಬಾಹ್ಯ ಬೆಂಬಲ ಕೊಡುವುದಾಗಲೀ; ಅಥವಾ ಬೆಂಬಲ ಪಡೆಯುವುದಾಗಲೀ ಪ್ರಶ್ನೆ ಉದ್ಭವವಾಗುವುದಿಲ್ಲ. ಮತದಾರರು ನಮ್ಮನ್ನು ವಿಪಕ್ಷವಾಗಿ ಕೂರಿಸಿದ್ದಾರೆ. ವಿಪಕ್ಷವಾಗಿ ಜವಾಬ್ದಾರಿಯುತ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಅದರ ಬಗ್ಗೆ ಚರ್ಚೆ ಮಾಡುವ ಪ್ರಶ್ನೆಯೇ ಇಲ್ಲ ಎಂದರು.

ಆಡಳಿತ ನಡೆಸಲು ಸಾಧ್ಯವಿಲ್ಲವೆಂದಾದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿ:

ಬೆಳಗಾವಿಗೆ ಬಂದು ಸುಮ್ಮನೇ ಕಾಟಾಚಾರಕ್ಕೆ ಅಧಿವೇಶನ ಮಾಡದಿರಿ. ರೈತರು ಚಳಿಗಾಲದ ಅಧಿವೇಶನವನ್ನು ಕಾತರದಿಂದ ಕಾಯುತ್ತಿದ್ದಾರೆ. ಕಬ್ಬು ಬೆಳೆಗಾರರ ಸಮಸ್ಯೆ, ಮೆಕ್ಕೆ ಜೋಳ, ಭತ್ತ ಬೆಳೆಯುವ ರೈತರಿಗೆ ಸರಕಾರವು ಪರಿಹಾರ ಕೊಡುವುದಾಗಿ ರೈತರು ಕಾಯುತ್ತಿದ್ದಾರೆ ಎಂದು ಗಮನ ಸೆಳೆದರು. ಅಡಿಕೆ ಬೆಳೆಗಾರರೂ ಸಂಕಷ್ಟದಲ್ಲಿದ್ದು, ಇದ್ಯಾವುದಕ್ಕೂ ಪರಿಹಾರ ನೀಡುವ ಲಕ್ಷಣ ಕಾಣುತ್ತಿಲ್ಲ ಎಂದು ಆಕ್ಷೇಪಿಸಿದರು.

ಆಡಳಿತ ನಡೆಸಲು ಸಾಧ್ಯವಿದ್ದರೆ ನಡೆಸಿ; ಇದೇರೀತಿ ಕಿತ್ತಾಟ ಮಾಡಿಕೊಂಡು ದೆಹಲಿಯಲ್ಲಿ ನಾಲ್ಕು ದಿನ, ಬೆಂಗಳೂರಿನಲ್ಲಿ 3 ದಿನ ಇರುವುದಾದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿ ಎಂದರು. ಇವರು ಬೀದಿಗಿಳಿದು ಬಡಿಗೆ ತೆಗೆದುಕೊಂಡು ಹೊಡೆದಾಡುವ ಸನ್ನಿವೇಶ ಸೃಷ್ಟಿಯಾಗಿದೆ. ಅವರು ಹೊಡೆದಾಡಿಕೊಂಡರೆ ನಾವೇನು ಮಾಡಬೇಕೆಂದು ಯೋಚಿಸುತ್ತೇವೆ ಎಂದು ತಿಳಿಸಿದರು.

ಕಾಂಗ್ರೆಸ್ಸಿನ ಒಳಗಿನ ಬಡಿದಾಟದಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದೆ ಎಂದು ಟೀಕಿಸಿದರು. ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಇದರ ನಡುವೆ ಕಬ್ಬು ಬೆಳೆಗಾರರು, ತೊಗರಿ, ಹುರುಳಿ ಬೆಳೆಗಾರರು ಸೇರಿ ರೈತರು ಸಂಕಷ್ಟದಲ್ಲಿದ್ದಾರೆ. ಮೆಕ್ಕೆಜೋಳ, ಭತ್ತ ಬೆಳೆಯುವ ರೈತರು ಖರೀದಿ ಕೇಂದ್ರ ಪ್ರಾರಂಭಿಸಲು ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ವಿವರಿಸಿದರು. ಪಾಪ; ಮುಖ್ಯಮಂತ್ರಿಗಳಿಗೆ ಸಮಸ್ಯೆಗಳನ್ನು ಪರಿಹರಿಸಲು ಸಮಯ ಸಿಗುತ್ತಿಲ್ಲ ಎಂದು ಆಕ್ಷೇಪಿಸಿದರು.

ಮೆಕ್ಕೆಜೋಳದ ಸಂಬಂಧ ಮುಖ್ಯಮಂತ್ರಿಗಳು ಕಳೆದ ವಾರ ಸಭೆ ಕರೆದಾಗ ಕೃಷಿ ಸಚಿವರು ದೆಹಲಿಯಲ್ಲಿದ್ದರು. ರಾಜ್ಯದ ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದೇ ಅವರ ಸಮಸ್ಯೆಗಳಿಗೆ ಪರಿಹಾರ ಕೊಡದೇ ಗೊಂದಲವನ್ನು ಆಡಳಿತ ಪಕ್ಷದ ಸದಸ್ಯರೇ ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು.


Share this with Friends

Related Post