ಮೈಸೂರು, ಜೂ.4: ಮುಡಾ ಬಹುಕೋಟಿ ಹಗರಣ ಖಂಡಿಸಿ ಮೈಸೂರು ಮಹಾನಗರ ಹಾಗೂ ಗ್ರಾಮಾಂತರ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಮೈಸೂರಿನ ಗೀತಾ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯಿಂದ ಮುಡಾ ಕಚೇರಿವರೆಗೆ ಮೆರವಣಿಗೆ ಮಾಡಿ ನಂತರ ಮುಡಾಕಚೇರಿಗೆ ಮುತ್ತಿಗೆ ಹಾಕಲು ಕಾರ್ಯಕರ್ತರು ನಿರ್ಧರಿಸಿದ್ದರು.
ಆದರೆ ಮೆರವಣಿಗೆ ಪ್ರಾರಂಭವಾಗಿ ಸ್ವಲ್ಪ ದೂರ ಸಾಗುತ್ತಿದ್ದಂತೆ ಪೊಲೀಸರು ಎಲ್ಲರನ್ನು ವಶಕ್ಕೆ ಪಡೆದರು.
ಮುಡಾ ಹಗರಣದಲ್ಲಿ ಪ್ರಭಾವಿ ವ್ಯಕ್ತಿಗಳು ಭಾಗಿಯಾಗಿದ್ದಾರೆ,ಹಾಗಾಗಿ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಯುವ ಮೋರ್ಚಾ ಕಾರ್ಯಕರ್ತರು ಆಗ್ರಹಿಸಿದರು.
ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಹೆಸರಿನಲ್ಲಿ ನಿವೇಶನ ನೀಡಲಾಗಿದೆ ಸತ್ಯಾಸತ್ಯತೆ ಹೊರ ಬರಬೇಕಿದೆ ಎಂದು ಒತ್ತಾಯಿಸಿದರು.
ಯುವ ಮೊರ್ಚಾದ ಜೋಗಿ ಮಂಜು,ಮಾಜಿ ಮೇಯರ್ ಶಿವಕುಮಾರ್ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.