ಕನಕಪುರ,ಫೆ.21: ವಕೀಲರ ಪ್ರತಿಭಟನೆ ವಿಚಾರದಲ್ಲಿ ಬಿಜೆಪಿ, ಜೆಡಿಎಸ್ ನವರು ರಾಜಕೀಯ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಆರೋಪಿಸಿದ್ದಾರೆ.
ವಕೀಲರ ಪ್ರತಿಭಟನೆ ವಿಚಾರದಲ್ಲಿ ಪಿಎಸ್‍ಐ ತಪ್ಪಿದ್ದರೆ ಕಾನೂನು ಕ್ರಮ ಕೈಗೊಳ್ಳಿ,ಇಲ್ಲಿ ಯಾರಿಗೂ ಅನ್ಯಾಯ ಆಗಬಾರದು ಎಂದು ಸೂಚಿಸಿದ್ದೆ ಆದರೂ ಪ್ರತಿಪಕ್ಷದವರು ರಾಜಕೀಯ ಮಾಡುತ್ತಿದ್ದಾರೆ ಎಂದು ಅಸಮಾಧಾನ ಪಟ್ಟರು ಡಿಕೆಶಿ.
ಕನಕಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಾಗೂ ಜೆಡಿಎಸ್ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿವೆ, ಬಿಜೆಪಿ ಯವರು ಅಶಾಂತಿ ಸೃಷ್ಟಿಸೋದು ಮಾಮೂಲಿ ಎಂದು ವ್ಯಂಗ್ಯವಾಡಿದರು.
ಕಮ್ಯೂನಲ್ ವಿಚಾರ ತೆಗೆದುಕೊಂಡು ರಾಜಕೀಯ ಮಾಡುತ್ತಾರೆ. ಅವರಿಗೆ ಮೈನಾರಿಟಿಯವರನ್ನು ಕಂಡರೆ ಆಗುವುದಿಲ್ಲ ಸ್ಥಳೀಯ ಶಾಸಕ ಹಾಗೂ ಅಧಿಕಾರಿ ಮೈನಾರಿಟಿಯವರು ಅದಕ್ಕಾಗಿ ರಾಜಕೀಯ ಮಾಡಿದ್ದಾರೆ ಅಸೆಂಬ್ಲಿಯಲ್ಲೇ ಮೈನಾರಿಟಿ ಅಧಿಕಾರಿ ಬೇಡ ಎನ್ನುತ್ತಿದ್ದವರು ಅವರು ಎಂದು ಡಿಸಿಎಂ ಆಕ್ರೋಶ ವ್ಯಕ್ತಪಡಿಸಿದರು.
ರಾಮನಗರದಲ್ಲಿ ಡಿಕೆ ಸಹೋದರರಿಂದ ಅಶಾಂತಿ ಸೃಷ್ಟಿ ಎಂಬ ಆರೋಪಕ್ಕೆ ತಿರುಗೇಟು ನೀಡಿದ ಡಿಕೆಶಿ, ರಾಮನಗರದಲ್ಲಿ ಗಲಾಟೆ ಮಾಡಿಸುತ್ತಿರುವುದೇ ಜೆಡಿಎಸ್. ಆ ಎಲ್ಲಾ ಗಲಾಟೆಗೆ ಕುಮಾರಸ್ವಾಮಿ ಹಾಗೂ ಬಿಜೆಪಿಯೇ ಕಾರಣ ಎಂದು ಟಾಂಗ್ ನೀಡಿದರು.
ಲೋಕಸಭಾ ಚುನಾವಣೆಗೆ ತಯಾರಿ ವಿಚಾರವಾಗಿ, ನಾವು ಕಳೆದ ಚುನಾವಣೆ ಮುಗಿದ ಮರುದಿನದಿಂದಲೇ ಕೆಲಸ ಆರಂಭಿಸಿದ್ದೇವೆ. ನಮ್ಮನ್ನ ಕಟ್ಟಿ ಹಾಕ್ತಿವಿ ಅಂತಿದ್ದಾರಲ್ಲ ನೋಡೋಣ, ಕಟ್ಟಿಹಾಕಲಿ ಎಂದು ಡಿ.ಕೆ.ಶಿವಕುಮಾರ್ ನೇರ ಸವಾಲು ಹಾಕಿದರು.
ಕನಕಪುರದಲ್ಲಿ ಕಾಡಾನೆ ಹಾವಳಿ ಹೆಚ್ಚಳವಾಗಿದೆಯಲ್ಲ ಎಂಬ ಪ್ರಶ್ನೆಗೆ, ನನ್ನ ಕ್ಷೇತ್ರದಲ್ಲಿ ಕಾಡಾನೆ ಹಾವಳಿ ಇರೋದು ನಿಜ, ಈಗಾಗಲೇ 9 ಮಂದಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಅರಣ್ಯ ಸಚಿವರ ಬಳಿ ಮಾತನಾಡಿದ್ದೇನೆ, ರೈಲ್ವೆ ಬ್ಯಾರಿಕೇಡ್ ಹೆಚ್ಚಿಸುವಂತೆ ಹೇಳಿದ್ದೇನೆ, ಸಾಧ್ಯವಾದಷ್ಟು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ ಎಂದು ತಿಳಿಸಿದರು.