ಬೆಂಗಳೂರು: ಬಳ್ಳಾರಿ ಪಾದಯಾತ್ರೆ ಕುರಿತು ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದು ನಾವು ಸಧ್ಯ ಡ್ರಗ್ ಮಾಫಿಯ ವಿರುದ್ಧ ಮೈಸೂರಿನಲ್ಲಿ ಹೋರಾಟ ಮಾಡಲು ತೀರ್ಮಾನ ಮಾಡಿದ್ದೇವೆ,ಕೋಗಿಲು ಕ್ರಾಸ್ ಅಕ್ರಮ ವಲಸಿಗರಿಗೆ ನುವಾಸ ಹಂಚಿಕೆ ವಿರುದ್ಧವೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಾಧ್ಯಮ ಗೋಷ್ಠಿ ನಡೆಸಿ ಮಾತನಾಡಿದ ಅವರು,ನಮ್ಮ ರಾಜ್ಯದ ಸಾಂಸ್ಕೃತಿಕ ನಗರಿ ಹಿರಿಮೆಯ ಮೈಸೂರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯೂ ಹೌದು. ಅಲ್ಲಿದ್ದ ಮಾದಕವಸ್ತು ಕಾರ್ಖಾನೆಯನ್ನು ಮಹಾರಾಷ್ಟ್ರದ ಪೊಲೀಸರು ಬಂದು ಮುಚ್ಚಿಸಬೇಕಾಯಿತು.ನಮ್ಮ ರಾಜ್ಯದ ಪಿಲೀಸರಿಗೆ ಇದರ ಮಾಹಿತಿಯೇ ಇಲ್ಲ ಅಷ್ಟೊಂದು ವಿಸ್ತಾರವಾಗಿ ಗೌಪ್ಯವಾಗಿ ಮಾದಕವಸ್ತು ಜಾಲ ಸಕ್ರೀಯವಾಗಿದೆ ಹಾಗಾಗಿ ಮೈಸೂರು ಒಳಗೊಂಡಂತೆ ರಾಜ್ಯಾದ್ಯಂತ ಡ್ರಗ್ ಮಾಫಿಯ ಹರಡಿರುವುದನ್ನು ಮಟ್ಟಹಾಕುವಂತೆ ಆಗ್ರಹಿಸಿ ಮೈಸೂರಿನಲ್ಲಿ ಹೋರಾಟ ಮಾಡಲು ತೀರ್ಮಾನ ಆಗಿದೆ ಎಂದು ತಿಳಿಸಿದರು.
ಧರ್ಮಸ್ಥಳದ ವಿಚಾರದಲ್ಲಿ ಮುಖ್ಯಮಂತ್ರಿಗಳೇ ಮುತುವರ್ಜಿ ವಹಿಸಿ ಕೆಲವು ನಗರ ನಕ್ಸಲರ ಮಾತು ಕೇಳಿ ಎಸ್‍ಐಟಿ ರಚಿಸಿದ್ದರು. ಧರ್ಮಸ್ಥಳದ ಶ್ರೀ ಕ್ಷೇತ್ರಕ್ಕೆ ಅಪಚಾರ ಎಸಗುವ ಕೆಲಸ ಮಾಡಿದ್ದರು ಆಗ ಬಿಜೆಪಿ ಹೋರಾಟ ಮಾಡಿತ್ತು. ಗುಂಡಿ ಅಗೆದಾಗ ಏನೂ ಸಿಗದ ಸಂದರ್ಭದಲ್ಲಿ ಬುರುಡೆ ಗ್ಯಾಂಗ್ ಮೇಲೆ ಆರೋಪ ಮಾಡಿ ಹಿಂದೆ ಸರಿಯುವ ಕೆಲಸ ಸಿದ್ದರಾಮಯ್ಯನವರ ಸುತ್ತಲಿರುವವರು ಮಾಡಿದ್ದಾರೆ. ನಾವು ಹೋರಾಟ ಮಾಡದೇ ಇದ್ದರೆ ಧರ್ಮಸ್ಥಳದ ಶ್ರೀ ಕ್ಷೇತ್ರಕ್ಕೆ ಅಪಚಾರ ಮಾಡುತ್ತಿದ್ದರು ಎಂದು ತಿಳಿಸಿದರು.
ಕೋಗಿಲು ವಿಚಾರದಲ್ಲಿ ಅಕ್ರಮ ವಲಸಿಗರ ಮನೆ ಕೆಡವಲಾಗಿತ್ತು. ಬಳಿಕ ಕೆ.ಸಿ.ವೇಣುಗೋಪಾಲ್ ಹೇಳಿದರು; ಬೆದರಿಕೆ ಹಾಕಿದರೆಂಬ ಕಾರಣ, ಕೇರಳ ವಿಧಾನಸಭಾ ಚುನಾವಣೆ ಬರುವ ನೆಪದಿಂದ ತೇಪೆ ಹಚ್ಚುವ ಕೆಲಸ ಮಾಡಲು ಸಿದ್ದರಾಮಯ್ಯರ ಸರಕಾರ ಹೊರಟಿತ್ತು. ಲಕ್ಷಾಂತರ ಬಡವರು ಮನೆಗೆ ಅರ್ಜಿ ಹಾಕಿದ್ದರೂ ಅವರಿಗೆ ಮನೆ ಕೊಟ್ಟಿಲ್ಲ ಎಂದು ಬಿಜೆಪಿ ಗಮನ ಸೆಳೆದಿದೆ. ಅಕ್ರಮ ವಲಸಿಗರಿಗೆ ಅವಕಾಶ ಕೊಡುವುದಿಲ್ಲ; ತೆರಿಗೆದಾರರ ಹಣ ಪೋಲಾಗಲು ಬಿಡುವುದಿಲ್ಲ ಎಂದು ಬಿಜೆಪಿ, ನಮ್ಮ ಸ್ಥಳೀಯ ನಾಯಕರು ಇದನ್ನು ಗಟ್ಟಿಯಾಗಿ ತೆಗೆದುಕೊಂಡ ಬಳಿಕ ಅಕ್ರಮ ವಲಸಿಗರನ್ನು ರಾತ್ರೋರಾತ್ರಿ ಕಾಂಗ್ರೆಸ್ ಮುಖಂಡರೇ ಎತ್ತಂಗಡಿ ಮಾಡಿದ್ದಾರೆಂಬ ಮಾಹಿತಿ ಬರುತ್ತಿದೆ.ನಮ್ಮ ಮುಖಂಡರು ಹೋದಾಗ ಅಲ್ಲಿ ಬೇರೆ ಕ್ಷೇತ್ರದ ಬಾಡಿಗೆ ವ್ಯಕ್ತಿಗಳನ್ನು ಬಿಟ್ಟ ಮಾಹಿತಿ ಸಿಗುತ್ತಿದೆ. ಈ ರೀತಿಯ ಡ್ರಾಮವನ್ನು ನಾವು ಒಪ್ಪುವುದಿಲ್ಲ, ಇದರ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.
ಬಳ್ಳಾರಿ ಪಾದಯಾತ್ರೆ ಕುರಿತು ರಾಜ್ಯ ಘಟಕದಿಂದ ಇನ್ನು ಯಾವುದೇ ನಿರ್ಧಾರವಾಗಿಲ್ಲ, ನಮ್ಮ ವರಿಷ್ಠರು ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

