Fri. Mar 6th, 2026

ರೈತರ ಹೋರಾಟದಲ್ಲಿ ಬಿಜೆಪಿಯಿಂದ ರಾಜಕೀಯ,ರಾಜ್ಯ ಸರ್ಕಾರದ ವಿರುದ್ಧ ಷಡ್ಯಂತ್ರ: ಎಂಬಿ ಪಾಟೀಲ್

Share this with Friends

ವಿಜಯಪುರ: ಕಬ್ಬು ಬೆಲೆ ವಿಚಾರದಲ್ಲಿನ ಹೋರಾಟವನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಂಡಿದ್ದು,ಇದರಲ್ಲಿ ತಮ್ಮ ಮತ್ತು ಸಿದ್ದರಾಮಯ್ಯ ಮಾತ್ರವಲ್ಲ ಇಡೀ ರಾಜ್ಯ ಸರ್ಕಾರದ ವಿರುದ್ಧವೇ ಷಡ್ಯಂತ್ರ ನಡೆದಿದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಗಂಭೀರ ಆರೋಪ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಬ್ಬು ದರ ಘೋಷಣೆ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕಿಂತ ಕೇಂದ್ರ ಸರ್ಕಾರದ ಪಾಲು ದೊಡ್ಡದಿದೆ. ಎಫ್‌ಆರ್‌ಪಿ ನಿರ್ಧರಿಸುವುದು, ಇಥೆನಾಲ್ ಕೋಟಾ ಫಿಕ್ಸ್ ಮಾಡುವುದು, ಎಂಎಸ್‌ಪಿ ನಿಗದಿಪಡಿಸುವುದು, ಸಕ್ಕರೆ ಆಮದು ಮತ್ತು ರಫ್ತು ಮಾಡುವುದು, ಹೀಗೆ ಬಹುತೇಕ ಹಂತದಲ್ಲಿ ಕೇಂದ್ರ ಸರ್ಕಾರದ ಪಾತ್ರವೇ ದೊಡ್ಡದಿದೆ ಆದರೂ ರಾಜ್ಯ ಸರ್ಕಾರದ ಮೇಲೆ ಬಿಜೆಪಿ ಆರೋಪ ಮಾಡುತ್ತಿದೆ ಎಂದು ಟೀಕಿಸಿದರು.

ಈಗಾಗಲೇ ರಾಜ್ಯ ಸರ್ಕಾರ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆ ನಡೆಸಿ ಎಲ್ಲರ ಮನವೊಲಿಸಿ, ರೈತರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಮ್ಮತದ ನಿರ್ಣಯ ಮಾಡಿ ದರ ಘೋಷಿಸಿದೆ. ಸರ್ಕಾರ ಮತ್ತು ಕಾರ್ಖಾನೆ ತಲಾ 50 ರೂ. ನೀಡುವ ನಿರ್ಧಾರವನ್ನು ರೈತರೂ ಒಪ್ಪಿದ್ದಾರೆ ಆದರೂ ಬಿಜೆಪಿ ರಾಜಕೀಯ ಮುಂದುವರೆಸಿದೆ ಎಂದು ದೂರಿದರು.

ಕಬ್ಬು ಬೆಳೆಗಾರರ ಹೋರಾಟಕ್ಕೆ ಸಂಬಂಧಿಸಿದಂತೆ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ, ರೈತರು ಪಕ್ಷಾತೀತವಾಗಿ ಹೋರಾಟ ಮಾಡಬೇಕಿತ್ತು, ರೈತರ ಹೋರಾಟ ಸ್ಥಳದಲ್ಲಿ ವಿಜಯೇಂದ್ರ ಹೋಗಿ ಮಲಗಿದ್ದೇಕೆ? ರೈತನ ಮಗನಾಗಿ ಬಂದೆ ಎನ್ನುತ್ತಾರೆ ನಾವು ನೀವು ಎಲ್ಲರೂ ರೈತರ ಮಕ್ಕಳೇ,  ಅಲ್ಲಿ ಮಲಗಿಕೊಂಡು ನಾಟಕ ಮಾಡುವ ಬದಲು ಪ್ರಧಾನಿ ಭೇಟಿಗೆ ಅವಕಾಶ ಕೊಡಿಸಲಿ ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯ ಅವರು ಇಥೆನಾಲ್ ಖರೀದಿ ವಿಚಾರದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಹೇಳಿಕೆ ನೀಡಿದ್ದಾರೆ.ಲೋಕಸಭೆಯಲ್ಲಿ ಇದೇ ಆಗಸ್ಟ್-ಅಕ್ಟೋಬರ್ ತಿಂಗಳಲ್ಲಿಯೇ ಪ್ರಲ್ಹಾದ್ ಜೋಶಿ ಅವರು ಕೊಟ್ಟ ಉತ್ತರದ ಪ್ರತಿ ತಮ್ಮ ಬಳಿ ಇದೆ. ಆ ಮಾಹಿತಿ ಆಧರಿಸಿಯೇ ಸಿದ್ದರಾಮಯ್ಯ ಅವರು ಹೇಳಿದ್ದು. ಬೇಕಾದರೆ ಆ ಪ್ರತಿ ಕೊಡುತ್ತೇವೆ. ಹಾಗೊಂದು ವೇಳೆ ಜೋಷಿ ಅವರೇ ತಪ್ಪು ಮಾಹಿತಿ ನೀಡಿದ್ದರೆ ತಮಗದು ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಕೇಂದ್ರ ಸರ್ಕಾರದ ಜವಾಬ್ದಾರಿ:

ಕಬ್ಬು ಮತ್ತು ಸಕ್ಕರೆ ದರ ನಿಗದಿಯಲ್ಲಿ ಕೇಂದ್ರ ಸರ್ಕಾರದ ಪಾತ್ರವೇ ದೊಡ್ಡದು. ಟನ್ ಕಬ್ಬಿಗೆ 3550 ರೂಪಾಯಿ ಎಫ್‌ಆರ್‌ಪಿ ನಿಗದಿಪಡಿಸಿದ್ದು ಕೇಂದ್ರ ಸರ್ಕಾರ, ಕೇಂದ್ರ ಗ್ರಹ ಇಲಾಖೆ ಮಂತ್ರಿ ಪ್ರಲ್ಹಾದ್ ಜೋಷಿ ಅವರೇ ಅಲ್ಲವೇ? ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವೀಸ್ ಪ್ರಧಾನಿ ಮತ್ತು ಸಚಿವ ಪ್ರಲ್ಹಾದ್ ಜೋಷಿಗೆ ಪತ್ರ ಬರೆದಿದ್ದು, ಸಕ್ಕರೆಯ ಎಂಎಸ್‌ಪಿ 31 ಇರುವುದನ್ನು 41ಕ್ಕೆ ಏರಿಕೆ ಮಾಡಿ ಎಂದಿದ್ದಾರೆ. ಸಕ್ಕರೆ ದರ ಏರಿಕೆಯಾದರೆ ರೈತರಿಗೆ ಅನುಕೂಲವಾಗಲಿದೆ.

ಕರ್ನಾಟಕದಲ್ಲಿ 2.70 ಕೋಟಿ ಲೀಟರ್ ಇಥೆನಾಲ್ ಉತ್ಪಾದನೆಯಾದರೆ ಖರೀದಿಯಾಗೋದು ಕೇವಲ 40 ಕೋಟಿ ಲೀಟರ್ ಮಾತ್ರ. ಶೇ.70ರಷ್ಟು ಮಾತ್ರ ಖರೀದಿಯಾಗುತ್ತಿದೆ. ಆದರೆ, ಗುಜರಾತ್‌ನಲ್ಲಿ ಗುಜರಾತ್‌ನಲ್ಲಿ ಉತ್ಪಾದನೆ 40 ಕೋಟಿ ಲೀಟರ್ ಇದ್ದರೆ  31 ಕೋಟಿ ಲೀಟರ್ ಖರೀದಿಯಾಗುತ್ತಿದೆ. ಅಂದರೆ 75 ರಷ್ಟು ಖರೀದಿಯಾಗುತ್ತದೆ. ಕೇಂದ್ರ ಸರ್ಕಾರದ ಜವಾಬ್ದಾರಿ ಬಿಟ್ಟು ರಾಜ್ಯ ಸರ್ಕಾರದ ಮೇಲೆ ರೈತರನ್ನು ಎತ್ತಿ ಕಟ್ಟು ಪ್ರಯತ್ನ ಮಾಡಿದರೆಂದು ಎಂ.ಬಿ. ಪಾಟೀಲ ಹರಿಹಾಯ್ದರು.


Share this with Friends

Related Post