ನವದೆಹಲಿ,ಮೇ.1: ನವದೆಹಲಿಯ 60ಕ್ಕೂ ಹೆಚ್ಚು ಶಾಲೆಗಳು ಮತ್ತು ಪಶ್ಚಿಮ ಬಂಗಾಳದ ರಾಜಭವನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು ದೇಶದ ಜನ ಬೆಚ್ಚಿಬಿದ್ದಿದ್ದಾರೆ.
ಶಾಲೆಗಳಿಗೆ ಬಾಂಬ್ ಹೆದರಿಕೆ ಕರೆ ಬರುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಶಾಲೆಗಳಿಗೆ ಧಾವಿಸಿ ಪರಿಶೀಲಿಸಿದರು ಮತ್ತು ಮಕ್ಕಳನ್ನು ಪೋಷಕರನ್ನು ಕರೆಸಿ ಅವರೊಂದಿಗೆ ವಾಪಸ್ಸು ಕಳುಹಿಸಿದರು.
ಪೊಲೀಸರು,ಬಾಂಬ್ ನಿಷ್ಕ್ರಿಯದಳ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿ ಶಾಲೆಗಳಲ್ಲಿ ಪರಿಶೀಲಿಸಿದರು.
ರಾಜಧಾನಿ ದಿಲ್ಲಿ ಹಾಗೂ ನೋಯ್ಡಾದ 60ಕ್ಕೂ ಹೆಚ್ಚು ಶಾಲೆಗಳಿಗೆ ಇ- ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಲಾಗಿದ್ದು, ಮಕ್ಕಳು, ಶಿಕ್ಷಕರು ಹಾಗೂ ಇತರೆ ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ಮುಂಜಾನೆಯೇ ಚಾಣಕ್ಯಪುರಿಯ ಸಂಸ್ಕೃತಿ ಶಾಲೆ, ಪೂರ್ವ ದಿಲ್ಲಿಯ ಮಯೂರ್ ವಿಹಾರದಲ್ಲಿನ ಮದರ್ ಮೇರಿ ಸ್ಕೂಲ್, ದ್ವಾರಕಾದ ಡೆಲ್ಲಿ ಪಬ್ಲಿಕ್ ಸ್ಕೂಲ್ ಸೇರಿದಂತೆ ಸುಮಾರು 60 ಕ್ಕೂ ಶಾಲೆಗಳಿಗೆ ಬೆದರಿಕೆ ಇ-ಮೇಲ್ ಬಂದಿದೆ.
ಈವರೆಗೂ ಯಾವುದೇ ಶಾಲೆಯ ಆವರಣದಲ್ಲಿ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ. ಬೆದರಿಕೆ ಇ ಮೇಲ್ ರವಾನೆಯಾದ ಮೂಲದ ಐಪಿ ವಿಳಾಸ ಪತ್ತೆ ಮಾಡಲು ಪ್ರಯತ್ನ ನಡೆಸಲಾಗಿದೆ.
ಇದು ಕಿಡಿಗೇಡಿಗಳ ಕೃತ್ಯ. ದೊಡ್ಡ ಮಟ್ಟದಲ್ಲಿ ಆತಂಕ ಸೃಷ್ಟಿಸಲು ಎಲ್ಲ ಶಾಲೆಗಳಿಗೂ ಬೆದರಿಕೆ ಇ ಮೇಲ್ ಕಳುಹಿಸಲಾಗಿದೆ.
2023ರ ಡಿ 1ರಂದು ಬೆಂಗಳೂರಿನ ಸುಮಾರು 68 ಶಾಲೆಗಳಿಗೆ ಇದೇ ರೀತಿ ಬೆದರಿಕೆ ಇ ಮೇಲ್ ಕರೆ ಬಂದಿದ್ದನ್ನು ಸ್ಮರಿಸಬಹುದು.
ಪಶ್ಚಿಮ ಬಂಗಾಳದ ರಾಜಭವನ ಭವನಕ್ಕೆ ಬಾಂಬ್ ಇಟ್ಟಿರುವುದಾಗಿ ಆಗಂತುಕರು ಕರೆ ಮಾಡಿದ್ದು ತಾವು ಟೆರೊರೊಸ್ ಭಯೋತ್ಪಾದಕ ಗುಂಪಿಗೆ ಸೇರಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ತಕ್ಷಣ ಅಲರ್ಟ್ ಆದ ಪೊಲೀಸರು ರಾಜಭವನ ಸಂಪೂರ್ಣ ತಪಾಸನೆ ಮಾಡಿ ಇದು ಹುಸಿ ಕರೆ ಎಂದು ಸ್ಪಷ್ಟಪಡಿಸಿದ್ದಾರೆ