Fri. Mar 6th, 2026

ಕಸದ ಮಾಫಿಯಾ ಬ್ಲಾಕ್ ಮೇಲ್ ಗೆ ಬ್ರೇಕ್: ಡಿಸಿಎಂ ಡಿಕೆ ಶಿವಕುಮಾರ್

Share this with Friends

ಬೆಂಗಳೂರು: ಕಸದ ಮಾಫಿಯಾಕ್ಕೆ ಬಗ್ಗದೇ 33 ಪ್ಯಾಕೇಜ್ ಮೂಲಕ ಕಸ ವಿಲೇವಾರಿಗೆ ನಿರ್ಧರಿಸಿದ್ದು ಅದಕ್ಕೆ ನ್ಯಾಯಾಲಯವೂ ಸಮ್ಮತಿಸಿದೆ.ಕಸದಿಂದ ರಸ ಮಾಡುವ ಮೂಲಕ ಬೆಂಗಳೂರಿನ ಕಸದ ಸಮಸ್ಯೆಗೆ ಮುಕ್ತಿ ಹಾಡಲು ಸಂಕಲ್ಪ ತೊಟ್ಟಿದ್ದು, ಕಸದ ಮಾಫಿಯಾ ಬ್ಲಾಕ್ ಮೇಲ್ ಗೆ ಬ್ರೇಕ್ ಹಾಕಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಮಾಗಡಿ ಮುಖ್ಯ ರಸ್ತೆಯ ಕನ್ನಹಳ್ಳಿಯಲ್ಲಿ ಸಮಗ್ರ ಘನ ತ್ಯಾಜ್ಯ ವಿಂಗಡಣಾ ಘಟಕದ 1ನೇ ಹಂತಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಸ್ವಲ್ಪ ‌ದಿನಗಳಲ್ಲೇ ಪ್ಯಾಕೇಜ್ ಗಳು ಕಾರ್ಯರೂಪಕ್ಕೆ ಬರಲಿದೆ. ಕಸದ ಮಾಫಿಯಾ ಎನ್ನುವ ಪದವನ್ನು ನಾನು ಪದೇ ಪದೆ ಏಕೆ ಬಳಸುತ್ತಿದ್ದೇನೆ ಎಂದರೆ. ಇವರು ಪ್ರತಿ ಹಂತದಲ್ಲಿ ನ್ಯಾಯಾಲಯಗಳಿಗೆ ತೆರಳಿ ತಡೆಯಾಜ್ಞೆ ತಂದು ಸರ್ಕಾರಕ್ಕೆ ಬ್ಲಾಕ್ ಮೇಲ್ ಮಾಡುತ್ತಿದ್ದರು. ಇವರುಗಳು ಹೇಳಿದಂತೆ ಸರ್ಕಾರ ಕೇಳಬೇಕು ಎನ್ನುವ ಧೋರಣೆ ಹೊಂದಿದ್ದರು.‌ ಇದಕ್ಕೆಲ್ಲ ಕಡಿವಾಣ ಹಾಕಲಾಗಿದೆ” ಎಂದರು.

ಕಸದ ಸಮಸ್ಯೆ ಮುಕ್ತಿಗೆ ಸಂಕಲ್ಪ:

“ಬೆಂಗಳೂರಿನ ಕಸದ ಸಮಸ್ಯೆಗೆ ಮುಕ್ತಿ ಹಾಡಲೇ ಬೇಕು ಎಂದು ನಾನು ಸಂಕಲ್ಪ ಮಾಡಿದ್ದೇನೆ. ಸ್ವಯಂಸೇವಾ ಸಂಸ್ಥೆ ಹಸಿರು ದಳದವರು ಸೇರಿ ಅತ್ಯಂತ ಕ್ಲಿಷ್ಟಕರ ಕೆಲಸ ಮಾಡುತ್ತಿದ್ದಾರೆ. ನಗರದ ಅನೇಕ ಕಡೆ ಜನರು ಎಲ್ಲೆಂದರಲ್ಲಿ ಕಸ ಎಸೆಯುವುದು, ಕಟ್ಟಡ ತ್ಯಾಜ್ಯ ಸುರಿದು ಹೋಗುತ್ತಿದ್ದಾರೆ.‌ ಇದರ ನಿಯಂತ್ರಣಕ್ಕೆ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ದಂಡ ಕಟ್ಟಿಸಿಕೊಳ್ಳಲಾಗುತ್ತಿದೆ. ಕಸ ಸುರಿಯುವ ವಾಹನಗಳಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ” ಎಂದರು.

“ನನ್ನ ಗುರಿ, ಉದ್ದೇಶ, ಆಲೋಚನೆ, ಬದ್ದತೆ ಸ್ಪಷ್ಟವಾಗಿದೆ. ಕಸದಿಂದ ಗ್ಯಾಸ್ ತಯಾರಿಕೆಗೆ ನಾಲ್ಕು ಸಂಸ್ಥೆಗಳನ್ನು ಮಾಡಬೇಕು ಎಂದು ಹೊರಟಿದ್ದೆ. ಜಾಗದ ಸಮಸ್ಯೆಯಿಂದ ಈಗ ಎರಡು ಸ್ಥಳಗಳಲ್ಲಿ ಅವಕಾಶ ನೀಡಿ ಟೆಂಡರ್ ಕೂಡ ನೀಡಲಾಗಿದೆ”.”ಈ ಹಿಂದೆ 10- 12 ಕ್ಕೂ ಹೆಚ್ಚು ಸಂಸ್ಥೆಗಳು ಕಸದಿಂದ  ವಿದ್ಯುತ್ ಉತ್ಪಾದನೆ ಮಾಡುತ್ತೇವೆ ಎಂದು ಬಂದು ವಿಫಲರಾಗಿದ್ದಾರೆ. 24 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ತಂತ್ರಜ್ಞಾನದಿಂದ ಯಶಸ್ವಿಯಾಗಬಹುದು ಎಂದು ಕೇಳಿದ್ದೇನೆ. ಜೊತೆಗೆ ದೆಹಲಿ, ಚೆನ್ನೈ, ಹೈದರಾಬಾದ್ ನಗರಗಳಲ್ಲಿ ಇದನ್ನು ನಾನು ಕಣ್ಣಾರೆ ನೋಡಿದ್ದೇನೆ” ಎಂದರು.

“ಕಸದಿಂದ ಗ್ಯಾಸ್ ಉತ್ಪಾದನೆಗೆ ಇಳಿದಿರುವ ಅಭಿಷೇಕ್ ಅವರ ಸಂಸ್ಥೆ ಪ್ರಾಥಮಿಕವಾಗಿ 100 ಕೋಟಿ ರೂಪಾಯಿ ಬಂಡವಾಳ ಹೂಡಲಿದೆ. ಒಟ್ಟು 300 ಕೋಟಿ ಹೂಡಿಕೆ ಮಾಡಲಿದ್ದಾರೆ. ಇವರಿಗೆ ಸರ್ಕಾರ ಎಲ್ಲಾ ರೀತಿಯ ಸಹಕಾರವನ್ನು ನೀಡಲಿದೆ. ಈ ಪ್ರಯೋಗ ಯಶಸ್ವಿಯಾದರೆ ರಾಜ್ಯದಲ್ಲಿ ಇನ್ನೂ ಒಂದಷ್ಟು ಕಡೆ ಸ್ಥಾಪಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಯಾವುದೇ ಯಶಸ್ಸು ಸಿಗಬೇಕಾದರೆ ಶ್ರಮ ಅಗತ್ಯ. ಶ್ರಮವಿಲ್ಲದೆ ಏನೂ ಸಿಗುವುದಿಲ್ಲ. ಇದು ಸ್ವಲ್ಪ ಸ್ಪರ್ಧಾತ್ಮಕ ಕೆಲಸ ಏಕೆಂದರೆ ಇದಕ್ಕೆ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನಿಮಗೆ ಶುಭವಾಗಲಿ, ನಾನು ಹಾಗೂ ನಮ್ಮ ಅಧಿಕಾರಿಗಳು ಈ ಸಂಸ್ಥೆಯ ಜೊತೆಯಲ್ಲಿರುತ್ತೇವೆ” ಎಂದರು.

“ವಿದ್ಯುತ್ ಉತ್ಪಾದನೆಗೆ ಒಂದಷ್ಟು ಸಂಸ್ಥೆಗಳಿಗೆ ಕ್ಯಾಬಿನೆಟ್ ನಲ್ಲಿ ಒಪ್ಪಿಗೆ ಪಡೆದು ಅವಕಾಶ ನೀಡಲಾಗಿತ್ತು. ಆದರೆ ಅವರು ವಿದ್ಯುತ್ ಉತ್ಪಾದನೆಯಲ್ಲಿ ವಿಫಲರಾಗಿದ್ದಾರೆ. ಈಗ ಒಂದೆರಡು ಸಂಸ್ಥೆಗೆ ಹೊರತು ಪಡಿಸಿ ಮಿಕ್ಕವರನ್ನು ರದ್ದು ಮಾಡಲಾಗಿದೆ” ಎಂದು ತಿಳಿಸಿದರು.


Share this with Friends

Related Post