ಬೆಂಗಳೂರು : ಬ್ರಿಟನ್ ಮಹಾರಾಜ 3ನೇ ಚಾರ್ಲ್ಸ್ ಅವರ ಜನ್ಮದಿನೋತ್ಸವದ ಅಂಗವಾಗಿ ನಗರದ ತಾಜ್ ವೆಸ್ಟ್ ಎಂಡ್ ಹೋಟೆಲಿನಲ್ಲಿ ಗುರುವಾರ ರಾತ್ರಿ ಆಯೋಜಿಸಿದ್ದ ಸಂಭ್ರಮಾಚರಣೆಯಲ್ಲಿ ಕರ್ನಾಟಕದ ಕೈಗಾರಿಕಾ ಮತ್ತು ಶೈಕ್ಷಣಿಕ ಅಭಿವೃದ್ಧಿಯ ಹೊಸ ನೀಲನಕ್ಷೆಯನ್ನು ತೆರೆದಿಡಲಾಯಿತು.
ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಚಂದ್ರು ಅಯ್ಯರ್ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ರಾಜ್ಯದ ಪ್ರಮುಖ ಸಚಿವರು ಭಾಗವಹಿಸಿ, ಬ್ರಿಟನ್ ಮತ್ತು ಕರ್ನಾಟಕದ ನಡುವಿನ ದ್ವಿಪಕ್ಷೀಯ ಬಾಂಧವ್ಯವನ್ನು ಸ್ಮರಿಸಿದರು.
ಬ್ರಿಟನ್ ಹೂಡಿಕೆಗೆ ಕೆಡಬ್ಲ್ಯೂಐಎನ್ ಸಿಟಿ ವೇದಿಕೆ:
ಕಾರ್ಯಕ್ರಮದಲ್ಲಿ ಮಾತನಾಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, “ಬ್ರಿಟನ್ ಮತ್ತು ನಮ್ಮ ರಾಜ್ಯದ ನಡುವೆ ಐತಿಹಾಸಿಕ ವ್ಯಾಪಾರ ಸಂಬಂಧವಿದೆ. ರೋಲ್ಸ್ ರಾಯ್ಸ್ ಮತ್ತು ಟೆಸ್ಕೋದಂತಹ ಸಂಸ್ಥೆಗಳು ನಮ್ಮ ಅಭಿವೃದ್ಧಿಯಲ್ಲಿ ಪಾಲುದಾರರಾಗಿವೆ. ದಾಬಸಪೇಟೆ ಬಳಿ ನಿರ್ಮಾಣವಾಗುತ್ತಿರುವ ‘ಕೆಡಬ್ಲ್ಯೂಐಎನ್ ಸಿಟಿ’ (KWIN City) ಯೋಜನೆಯಲ್ಲಿ ಬ್ರಿಟನ್‌ನ ಪ್ರತಿಷ್ಠಿತ ಕಂಪನಿಗಳು ಮತ್ತು ಉನ್ನತ ವಿಶ್ವವಿದ್ಯಾಲಯಗಳು ನೆಲೆಯೂರಲಿವೆ. ಇದು ರಾಜ್ಯದ ಯುವಜನರಿಗೆ ಜಾಗತಿಕ ಮಟ್ಟದ ಉದ್ಯೋಗಾವಕಾಶ ನೀಡಲಿದೆ,” ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಲಂಡನ್ ಪದವಿ ಕನಸು ನನಸು:
ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮಾತನಾಡಿ, “ಶೈಕ್ಷಣಿಕ ಕ್ಷೇತ್ರದಲ್ಲಿ ನಾವು ಬ್ರಿಟನ್ ಜೊತೆಗಿನ ಸಹಭಾಗಿತ್ವವನ್ನು ವಿಸ್ತರಿಸುತ್ತಿದ್ದೇವೆ. ಟ್ವಿನ್ನಿಂಗ್ ಕಾರ್ಯಕ್ರಮದ ಅಡಿಯಲ್ಲಿ ಈ ಬಾರಿಯೂ 30 ವಿದ್ಯಾರ್ಥಿಗಳಿಗೆ ಬ್ರಿಟನ್‌ನಲ್ಲಿ ವ್ಯಾಸಂಗ ಮಾಡುವ ಸುವರ್ಣಾವಕಾಶ ದೊರೆಯಲಿದೆ. ಲಂಡನ್‌ನ ಇಂಪೀರಿಯಲ್ ಕಾಲೇಜು ಮತ್ತು ಲಿವರ್ಪೂಲ್ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳೊಂದಿಗೆ ಶೈಕ್ಷಣಿಕ ವಿನಿಮಯದ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ,” ಎಂದು ಮಾಹಿತಿ ನೀಡಿದರು.
ಬ್ರಿಟಿಷ್ ಸಂಸ್ಕೃತಿ ಮತ್ತು ಕರ್ನಾಟಕದ ಆತಿಥ್ಯದ ಸಮ್ಮಿಲನದಂತೆ ಕಂಡ ಈ ಕಾರ್ಯಕ್ರಮದಲ್ಲಿ ಉಭಯ ದೇಶಗಳ ಹಿರಿಯ ಅಧಿಕಾರಿಗಳು, ರಾಜತಾಂತ್ರಿಕರು ಮತ್ತು ಪ್ರಮುಖ ಉದ್ಯಮಿಗಳು ಉಪಸ್ಥಿತರಿದ್ದರು.

