Fri. Mar 6th, 2026

ದೇವನಹಳ್ಳಿ ಸಮೀಪ ತಲೆ ಎತ್ತಲಿದೆ ಬುರ್ಕಾನ್ ಗ್ರೂಪ್ ನ ಎಐ ಸರ್ವರ್ ಉತ್ಪಾದನಾ ಘಟಕ

Share this with Friends

ಬೆಂಗಳೂರು: ಡೇಟಾ ಸೆಂಟರ್ ಗಳಲ್ಲಿ ಬಳಕೆಯಾಗುವ ಎಐ ಸರ್ವರ್ ಗಳ ಉತ್ಪಾದನಾ ಘಟಕವನ್ನು ಆರಂಭಿಸಲು ಬುರ್ಕಾನ್ ವರ್ಲ್ಡ್ ಇನ್ವೆಸ್ಟ್ಮೆಂಟ್ ಗ್ರೂಪ್ ಮುಂದಾಗಿದ್ದು, ದೇವನಹಳ್ಳಿ ಸಮೀಪ ಅಗತ್ಯ ಜಮೀನು ಒದಗಿಸಲು ಸರ್ಕಾರ ಸಿದ್ದವಿದೆ ಅಲ್ಲದೆ ಈ ಸಮೂಹವು ಅತ್ಯಾಧುನಿಕ ಸಿಪಿಯು, ಜಿಪಿಯು, ಎಐ-ರೆಡಿ ನೆಟ್ವರ್ಕ್ ಸ್ವಿಚ್ ಉತ್ಪಾದನೆ ಆರಂಭಿಸುವುದಕ್ಕೂ ಬಯಸಿದ್ದು ಅದಕ್ಕೂ ಎಲ್ಲಾ ರೀತಿಯ ಸಹಕಾರ ನೀಡಲು ರಾಜ್ಯ ಸರ್ಕಾರ ಬದ್ದವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ಅಮೆರಿಕದ ಮಿಯಾಮಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಬುರ್ಕಾನ್ ವರ್ಲ್ಡ್ ಇನ್ವೆಸ್ಟ್ಮೆಂಟ್ ಗ್ರೂಪ್ ನ ಅಧೀನ ಸಂಸ್ಥೆಯಾದ ಟಿಜಿಜಿ (ದಿ ಘಾಜಿ ಗ್ರೂಪ್)  ಸಿಇಒ ಶಫಿ ಖಾನ್ ಮತ್ತು ಅವರ ತಂಡ ಭೇಟಿ ವಿಧಾನಸೌಧಕ್ಕೆ ನೀಡಿತು. ಸಚಿವ ಎಂಬಿ ಪಾಟೀಲ್ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ಹೂಡಿಕೆ ಮತ್ತಿತರ ಸಂಗತಿಗಳ ಬಗ್ಗೆ ವಿಸ್ತೃತ ಮಾತುಕತೆ ನಡೆಸಿತು. ರಾಜ್ಯದಲ್ಲಿ ಕೃತಕ ಬುದ್ಧಿ ಮತ್ತೆ ತಂತ್ರಜ್ಞಾನ ದಿಂದ ಕಾರ್ಯನಿರ್ವಹಿಸುವ ಅತ್ಯಾಧುನಿಕ ಎಐ ಸರ್ವರ್ ಗಳ ಉತ್ಪಾದನೆಗೆ 1,500 ಕೋಟಿ ರೂಪಾಯಿ ಬಂಡವಾಳ ಹೂಡಲು ನಿರ್ಧರಿಸಿದ್ದು, ದೇವನಹಳ್ಳಿ ಸಮೀಪ 10-15 ಎಕರೆ ಭೂಮಿಯ ಬೇಡಿಕೆ ಇಟ್ಟಿತು, ಇದಕ್ಕೆ ಸ್ಪಂಧಿಸಿದ ಸಚಿವ ಎಂಬಿ ಪಾಟೀಲ್, ಜಮೀನು ಒದಗಿಸುವ ಭರವಸೆ ನೀಡಿದರು.

ಬಳಿಕ ಮಾತನಾಡಿದ ಸಚಿವ ಎಂಬಿ ಪಾಟೀಲ್, ಡೇಟಾ ಸೆಂಟರ್ ಗಳಲ್ಲಿ ಬಳಕೆಯಾಗುವ ಈ ಸರ್ವರ್ ಗಳಿಗೆ ವಿಪರೀತ ಬೇಡಿಕೆ ಇದ್ದು ಬೇರೆ ಬೇರೆ ದೇಶಗಳಿಗೆ ರಫ್ತು ಕೂಡ ಮಾಡುವುದಾಗಿ ಕಂಪನಿಯವರು ಹೇಳಿದೆ, ಅದಕ್ಕೆ ಪೂರ್ಣ ಸಹಕಾರ ನೀಡಲಾಗುವುದು. ಸಹಾಯಧನ ಇತ್ಯಾದಿ ವಿಚಾರಗಳ ಬಗ್ಗೆಯೂ ಅಧಿಕಾರಿಗಳ ಮಟ್ಟದಲ್ಲಿ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

ಬುರ್ಖಾನ್ ಸಮೂಹವು ಅತ್ಯಾಧುನಿಕ ಸಿಪಿಯು, ಜಿಪಿಯು, ಎಐ-ರೆಡಿ ನೆಟ್ವರ್ಕ್ ಸ್ವಿಚ್ ಉತ್ಪಾದನೆಯನ್ನೂ ರಾಜ್ಯದಲ್ಲಿ ಆರಂಭಿಸುವುದಕ್ಕೆ ಬಯಸಿದೆ. ಈ ಸಂಬಂಧ ಪ್ರಸ್ತಾಪ ಪ್ರಾಥಮಿಕ ಹಂತದಲ್ಲಿದೆ, ಇದಕ್ಕಾಗಿ ಅದು ಜಾಗತಿಕ ಮಟ್ಟದಲ್ಲಿ ತನ್ನ ತಾಂತ್ರಿಕ ಪಾಲುದಾರ ಕಂಪನಿಗಳಾದ ಗಿಗಾಬೈಟ್ ಮತ್ತು ಸೆರಾ ನೆಟ್ವರ್ಕ್ ಜತೆ ರಾಜ್ಯದಲ್ಲಿ ಬಂಡವಾಳ ಹೂಡುವುದಾಗಿ ತಿಳಿಸಿದೆ, ಬಂಡವಾಳ ಹೂಡಿಕೆಗೆ ಪೂರಕವಾಗಿ ಅಗತ್ಯ ಸಹಕಾರವನ್ನು ನೀಡುವ ಮೂಲಕ ರಾಜ್ಯ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಭರವಸೆ ನೀಡಿದರು.

ಬುರ್ಕಾನ್ ಕಂಪನಿಯ ಹೂಡಿಕೆಯಿಂದ ಸೆಮಿಕಂಡಕ್ಟರ್, ಎಐ ಹಾರ್ಡ್-ವೇರ್ ಮತ್ತು ಆಧುನಿಕ ಎಲೆಕ್ಟ್ರಾನಿಕ್ಸ್ ಕಾರ್ಯಪರಿಸರದ ಬಲವರ್ಧನೆಯಾಗಲಿದೆ. ಅದು ಉತ್ಪಾದನಾ ಪ್ರಕ್ರಿಯೆಯಲ್ಲಿ ರೆಸೊಲ್ಯೂಟ್ ಗ್ರೂಪ್ ಮತ್ತು ಕ್ವಾಡ್-ಜೆನ್ ಕಂಪನಿಗಳ ಸಹಯೋಗ ಹೊಂದಲು ಬಯಸಿದೆ. ಇದರಿಂದ ಸ್ಥಳೀಯವಾಗಿಯೇ ಆರ್ & ಡಿ ಅಭಿವೃದ್ಧಿ, ತಂತ್ರಜ್ಞಾನ ವರ್ಗಾವಣೆ, ಶಿಕ್ಷಣ ಸಂಸ್ಥೆಗಳು ಮತ್ತು ಇಲ್ಲಿಯ ಕೈಗಾರಿಕೆಗಳೊಂದಿಗೆ ಸಹಭಾಗಿತ್ವ ಕೈಗೂಡಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಕಂಪನಿಯು ಭಾರತ ಮತ್ತು ಇಎಂಇಎ ವಲಯಗಳಲ್ಲಿ ತಾನು ಒದಗಿಸಲಿರುವ ಸೇವೆಗಳಿಗೆ ಬೆಂಗಳೂರನ್ನು ಉತ್ಕೃಷ್ಟತಾ ಕೇಂದ್ರವನ್ನಾಗಿ ಮಾಡಿಕೊಳ್ಳಲಿದೆ. ಜತೆಗೆ ರಾಜ್ಯಾದ್ಯಂತ ವಿಶೇಷ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಒಟ್ಟಾರೆಯಾಗಿ ಅದು ನಮ್ಮೊಂದಿಗೆ ಬೃಹತ್ ಕೈಗಾರಿಕೆ, ಐಟಿ-ಬಿಟಿ ಮತ್ತು ಇ.ಎಸ್.ಡಿ.ಎಂ. ಕ್ಷೇತ್ರಗಳಲ್ಲಿ ಪಾಲುದಾರಿಕೆಯ ಅವಕಾಶಗಳನ್ನು ಪರಿಶೀಲಿಸುತ್ತಿದೆ ಎಂದು ಪಾಟೀಲ ಹೇಳಿದ್ದಾರೆ.

 


Share this with Friends

Related Post