Fri. Mar 13th, 2026

ಸಚಿವ ಸಂಪುಟ ಪುನಾರಚನೆ ಗುಸುಗುಸು: ಹಿರಿಯ ಸಚಿವರ ಸಭೆ ಕುರಿತು ರಾಮಲಿಂಗಾರೆಡ್ಡಿ ಸ್ಪಷ್ಟನೆ

Share this with Friends

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ಪುನಾರಚನೆಯ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿದ್ದು, ಈ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಇಂದು ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬರುವ ಸೋಮವಾರ ಸಂಜೆ 7:30ಕ್ಕೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಎಲ್ಲಾ ಹಿರಿಯ ಸಚಿವರ ಸಭೆ ಕರೆಯಲಾಗಿದೆ. ಕೇವಲ 16 ಸಚಿವರಿಗಷ್ಟೇ ಆಹ್ವಾನ ನೀಡಲಾಗಿದೆ, ಸಿಎಂ ಆಗಾಗ ಈ ರೀತಿ ಹಿರಿಯ ಸಚಿವರ ಸಭೆ ನಡೆಸುತ್ತಿರುತ್ತಾರೆ ಇದರಲ್ಲಿ ವಿಶೇಷ ಏನಿಲ್ಲ, ಅಂದಿನ ಸಭೆಯ ನಂತರ ಔತಣಕೂಟ ನಡೆಯಲಿದೆ,”ಅಧಿವೇಶನದಲ್ಲಿ ನಮ್ಮ ನಡೆ ಸೇರಿದಂತೆ ವಿಪಕ್ಷಗಳ ವಿರುದ್ಧ ಒಗ್ಗಟ್ಟು ಪ್ರದರ್ಶನ ಕುರಿತು ಚರ್ಚೆಯಾಗಲಿದೆ. ಒಳ ಮೀಸಲಾತಿ ವಿಚಾರವೂ ಚರ್ಚೆಯಾಗಬಹುದು ಎಂದರು.

ಚುನಾವಣಾ ಕಾರ್ಯತಂತ್ರ:

ಮುಂಬರುವ ಬಿಬಿಎಂಪಿ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿರಿಯ ಸಚಿವರು ಹಾಗೂ ಶಾಸಕರಿಗೆ ಹೆಚ್ಚಿನ ಜವಾಬ್ದಾರಿ ನೀಡುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಹಿರಿಯರ ಅನುಭವವನ್ನು ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆ ಎಂಬ ಸೂಚನೆಯನ್ನು ಸಚಿವರು ನೀಡಿದರು.

ಸಂಪುಟ ಪುನಾರಚನೆ ಬಗ್ಗೆ ಪ್ರತಿಕ್ರಿಯೆ:

ಸಚಿವ ಸಂಪುಟ ಪುನಾರಚನೆ ಅಥವಾ ಸಚಿವರ ಕೈಬಿಡುವ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಅವರು, “ಸಂಪುಟದಲ್ಲಿ ಯಾರನ್ನು ಉಳಿಸಿಕೊಳ್ಳಬೇಕು ಅಥವಾ ಯಾರನ್ನು ಕೈಬಿಡಬೇಕು ಎಂಬುದು ಹೈಕಮಾಂಡ್ ಮತ್ತು ಮುಖ್ಯಮಂತ್ರಿಗಳ ತೀರ್ಮಾನ. ಈ ಬಗ್ಗೆ ನಮಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಸದ್ಯಕ್ಕೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ,” ಹೈಕಮಾಂಡ್ ಸಚಿವ ಸ್ಥಾನ ತ್ಯಾಗ ಮಾಡಿ ಎಂದರೆ ನಾನಷ್ಟೆ ಅಲ್ಲ ಎಲ್ಲರೂ ಪಾಲಿಸಬೇಕು ಎಂದರು.

ಹಿರಿಯ ಶಾಸಕರ ಅಸಮಾಧಾನ ತಣ್ಣಗಾಗಿಸುವ ಪ್ರಯತ್ನ:

ನಿನ್ನೆ ನಡೆದ ಹಿರಿಯ ಶಾಸಕರ ಸಭೆಯ ಕುರಿತು ಮಾತನಾಡುತ್ತಾ, “ಶಾಸಕರಲ್ಲಿ ಕೆಲವೊಮ್ಮೆ ಅಸಮಾಧಾನ ಇರುವುದು ಸಹಜ. ನಾಲ್ಕೈದು ಬಾರಿ ಶಾಸಕರಾದವರಲ್ಲಿ ಅಪೇಕ್ಷೆ ಸಹಜ, ಎರಡೂವರೆ ವರ್ಷದ ನಂತರ ಸಂಪುಟ ಪುನಾರಚನೆಯಾಗಲಿದೆ ಎಂದುಕೊಂಡಿದ್ದರು ಈಗ ಮುಂದೂಡಿಕೆಯಾಗಿದೆ ಹಾಗಾಗಿ ಅವರೆಲ್ಲಾ ಸಭೆ ಮಾಡಿದ್ದಾರೆಅದನ್ನು ಸರಿಪಡಿಸುವ ಕೆಲಸವನ್ನು ಪಕ್ಷದ ನಾಯಕರು ಮಾಡುತ್ತಾರೆ. 2028ರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಎಲ್ಲಾ ಸಭೆಗಳು ನಡೆಯುತ್ತಿವೆ,” ಎಂದು ಸಮರ್ಥಿಸಿಕೊಂಡರು.

ಬೆಂಗಳೂರಿನಲ್ಲಿ ಐಪಿಎಲ್ ಸಂಭ್ರಮ: ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ ನೀಡಿದ ಸಚಿವರು, “ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಆದರೆ, ಸುರಕ್ಷತೆಯ ದೃಷ್ಟಿಯಿಂದ ಕ್ರೀಡಾಂಗಣದ ಸಾಮರ್ಥ್ಯವನ್ನು 35,000 ಪ್ರೇಕ್ಷಕರಿಗೆ ಸೀಮಿತಗೊಳಿಸುವಂತೆ ಸೂಚಿಸಲಾಗಿದೆ,” ಎಂದರು.

ನಕಲಿ ಪ್ರಮಾಣಪತ್ರ ದಂಧೆಗೆ ಬ್ರೇಕ್: ಸಾರಿಗೆ ಇಲಾಖೆಯಲ್ಲಿ ಕೇಳಿಬಂದಿರುವ ನಕಲಿ ಡಿಪ್ಲೊಮಾ ಪ್ರಮಾಣಪತ್ರ ಹಗರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ಘೋಷಿಸಿದರು.

ದರ ಏರಿಕೆ ವದಂತಿ ಅಸತ್ಯ: ರಾಜ್ಯದಲ್ಲಿ ಸಾರಿಗೆ ಬಸ್ ದರ ಏರಿಕೆಯಾಗಲಿದೆ ಎಂಬ ಸುದ್ದಿಯನ್ನು ತಳ್ಳಿಹಾಕಿದ ಅವರು, ಸದ್ಯಕ್ಕೆ ಅಂತಹ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಾರ್ವಜನಿಕರಿಗೆ ಭರವಸೆ ನೀಡಿದರು.

ರಾಜಕೀಯ ಟೀಕೆಗೆ ಪ್ರತ್ಯುತ್ತರ:

ವಿರೋಧ ಪಕ್ಷಗಳು ಬಜೆಟ್ ಅನ್ನು ಟೀಕಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ 2028ರ ಚುನಾವಣೆಯಲ್ಲಿ ಗೆಲುವು ಕಷ್ಟವಲ್ಲ. ವಿರೋಧ ಪಕ್ಷದವರ ಟೀಕೆಗಳಿಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ,” ಎಂದು ಮಾರ್ಮಿಕವಾಗಿ ನುಡಿದರು.

 


Share this with Friends

Related Post