Tue. Nov 5th, 2024

ಕಸಾಪ ೨೦೨೩ನೆ ಸಾಲಿನ ಪುಸ್ತಕ ದತ್ತಿ ಪ್ರಶಸ್ತಿಗಳಿಗೆ ಪುಸ್ತಕಗಳ ಆಹ್ವಾನ

Share this with Friends

ಬೆಂಗಳೂರು,ಏ.27: ಕನ್ನಡ ಸಾಹಿತ್ಯ ಪರಿಷತ್ತು 2023ನೆ ಸಾಲಿನಲ್ಲಿ ಪುಸ್ತಕಗಳಿಗೆ ನೀಡುವ ವಿವಿಧ ದತ್ತಿ ಪುರಸ್ಕಾರಗಳಿಗೆ ಪುಸ್ತಕಗಳನ್ನು ಆಹ್ವಾನಿಸಿದೆ.

೨೦೨೩ ಜನವರಿ ೧ ರಿಂದ ಡಿಸೆಂಬರ್ ೩೧ ರೊಳಗೆ ಪ್ರಕಟಗೊಂಡ ಪುಸ್ತಕಗಳನ್ನು ಲೇಖಕರು ಅಥವಾ ಪ್ರಕಾಶಕರು ಕಳಿಸಿಕೊಡಬಹುದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಮನವಿ ಮಾಡಿದ್ದಾರೆ.

೨೦೨೩ನೆಯ ಸಾಲಿನಲ್ಲಿ ಪ್ರಕಟಗೊಂಡಿರುವ ಒಟ್ಟು 53 ವಿವಿಧ ಪುಸ್ತಕಗಳಿಗೆ ದತ್ತಿ ಪುರಸ್ಕಾರಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ನೀಡುತ್ತಿದೆ.

ಅದಕ್ಕಾಗಿ ಅನೇಕ ದತ್ತಿ ದಾನಿಗಳು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ನಿಧಿಯನ್ನು ಸ್ಥಾಪಿಸಿದ್ದು ಒಟ್ಟಾರೆ 57ವಿವಿಧ ಪ್ರಕಾರಗಳ ಪುಸ್ತಕಗಳನ್ನು ಆಹ್ವಾನಿಸಲಾಗಿದೆ.

ಪ್ರತಿ ದತ್ತಿ ಪ್ರಶಸ್ತಿಯ ಪ್ರವೇಶಕ್ಕೆ ತಲಾ ಮೂರು ಪುಸ್ತಕಗಳನ್ನು, ಯಾವ ದತ್ತಿಗಾಗಿ ಎನ್ನುವುದನ್ನು ಪುಸ್ತಕದ ಮೊದಲ ಪುಟದಲ್ಲಿ ಸ್ಪಷ್ಟವಾಗಿ ಬರೆದು ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು,ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-560 018.ಈ ವಿಳಾಸಕ್ಕೆ ಕಳುಹಿಸುವಂತೆ ಕೋರಿದ್ದಾರೆ.

೩ ೧ -೦೫ -೨೦೨೪ರ ಒಳಗೆ ತಲುಪುವಂತೆ ಪುಸ್ತಕಗಳನ್ನು ಕಳುಹಿಸಬೇಕು ತಡವಾಗಿ ಬಂದ ಪುಸ್ತಕಗಳನ್ನು ಸ್ವೀಕರಿಸಲಾಗುವುದಿಲ್ಲ,
ಜತೆಗೆ ಪರಿಶೀಲನೆಗೆ ಬಂದ ಪುಸ್ತಕಗಳನ್ನೂ ಹಿಂದಿರುಗಿಸಲಾಗುವುದಿಲ್ಲ.

ಬಹುಮಾನದ ಬಗ್ಗೆ ಕಸಾಪ ತಾನು ನೇಮಿಸುವ ತೀರ್ಪುಗಾರರು ನೀಡುವ ಶಿಫಾರಸ್ಸನ್ನು ಆದರಿಸಿ ಅಂತಿಮ ನಿರ್ಧಾರವನ್ನು ಕೈಗೊಳ್ಳುತ್ತದೆ.

ಯಾವುದೇ ಪುಸ್ತಕ ಪ್ರಶಸ್ತಿ ಪುರಸ್ಕೃತರು ತಾವು ಪ್ರಶಸ್ತಿ ಪಡೆದ ವಿಭಾಗಕ್ಕೆ ೩ ವರ್ಷ ಅರ್ಜಿ ಸಲ್ಲಿಸುವಂತಿಲ್ಲ ಅಲ್ಲದೆ ಪುಸ್ತಕ ದತ್ತಿ ಪುರಸ್ಕಾರ ಬರಹಗಾರರಿಗೆ ಯಾವುದೇ ಪ್ರಕಾರದಲ್ಲಾಗಲಿ ಮೂರು ಸಲ ಪ್ರಶಸ್ತಿ ಬಂದಿದ್ದರೆ ಜೀವಮಾನ ಪೂರ್ತಿ ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕ ದತ್ತಿ ಪುರಸ್ಕಾರಕ್ಕೆ ಅವರು ಅರ್ಜಿ ಸಲ್ಲಿಸುವಂತಿಲ್ಲ.

ಒಂದಕ್ಕಿತ ಹೆಚ್ಚು ಗ್ರಂಥಗಳು ಅತ್ಯುತ್ತಮವೆಂದು ಪರಿಗಣಿತವಾದರೆ ಬಹುಮಾನದ ಹಣವನ್ನು ಹಂಚಿ ವಿತರಿಸುವ ಹಕ್ಕು ಪರಿಷತ್ತಿಗೆ ಇರುತ್ತದೆ,ಪಿಎಚ್.ಡಿ. ಗ್ರಂಥಗಳು ಹಾಗೂ ನಿಘಂಟುಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ.

ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಹೆಸರು ವಿಳಾಸ, ದೂರವಾಣಿ ಹಾಗೂ ಮೊಬೈಲ್ ಸಂಖ್ಯೆಗಳನ್ನು ನಮೂದಿಸಬೇಕು.ಈ ಹಿಂದೆ ದತ್ತಿ ಪ್ರಶಸ್ತಿ ಬಂದಿದ್ದರೆ ಅದರ ವಿವರಗಳನ್ನೂ ಸ್ಪಷ್ಟವಾಗಿ ದಾಖಲಿಸಬೇಕು.

ಪುಸ್ತಕ ದತ್ತಿ ಪ್ರಶಸ್ತಿಗೆ ಪುಸ್ತಕಗಳನ್ನು ಕಳುಹಿಸುವವರು ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯತ್ವವನ್ನು ಹೊಂದಿರಬೇಕು, ಇನ್ನೂ ಸದಸ್ಯರಾಗಿರದಿದ್ದಲ್ಲಿ ಪರಿಷತ್ತಿನ ಆಜೀವ ಸದಸ್ಯತ್ವವನ್ನು ಪಡೆದುಕೊಂಡು ವಿವರಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ದತ್ತಿಯ ವಿವರಗಳಿಗಾಗಿ ಐದು ರೂಪಾಯಿ ಅಂಚೆಚೀಟಿಯನ್ನು ಲಗತ್ತಿಸಿದ ಕವರ್ ಅನ್ನು ಕನ್ನಡ ಸಾಹಿತ್ಯ ಪರಿಷತ್ತಿಗೆ ಕಳುಹಿಸಿ ವಿವರಗಳನ್ನು ಪಡೆಯ ಬಹುದು.

ಜತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಂತರ್ಜಾಲ ತಾಣಗಳಾದ
ಫೇಸ್ ಬುಕ್ : https://www.facebook.com/kasapaofficial,
https://www.facebook.com/KannadaSahityaParishattu
ಟ್ವಿಟರ್ : https://twitter.com/kannadaparishat
ಕೂ ಆಪ್ : https://www.kooapp.com/profile/kasapa
ಇನ್ ಸ್ಟಾಗ್ರಾಮ್ : https://www.instagram.com/kannadasahityaparishattu
ವೆಬ್ ಸೈಟ್ : https://kannadasahithyaparishattu.in
www.kasapa.in ಅಥವಾ ದೂರವಾಣಿ ಸಂಖ್ಯೆ 080-26612991/26623584 ಇವುಗಳ ಮೂಲಕವೂ ಮಾಹಿತಿಯನ್ನು ಪಡೆಯ ಬಹುದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಪ್ರಕಟಣಾ ವಿಭಾಗದ
ಸಂಚಾಲಕ ಎನ್.ಎಸ್.ಶ್ರೀಧರ ಮೂರ್ತಿ ತಿಳಿಸಿದ್ದಾರೆ.


Share this with Friends

Related Post