ತೆಲಂಗಾಣ,ಫೆ.23: ಕಾರು ಅಪಘಾತದಲ್ಲಿ ತೆಲಂಗಾಣ ಬಿ ಆರ್ ಎಸ್ ಶಾಸಕಿ ಜಿ.ಲಾಸ್ಯ ನಂದಿತಾ ಮೃತಪಟ್ಟಿದ್ದಾರೆ.
ಭಾರತ ರಾಷ್ಟ್ರ ಸಮಿತಿ (ಬಿಆರ್ ಎಸ್) ಮುಖಂಡರೂ ಮತ್ತು ತೆಲಂಗಾಣ ವಿಧಾನಸಭೆಯ ಸದಸ್ಯೆಯಾಗಿದ್ದ ಜಿ.ಲಾಸ್ಯಾ ನಂದಿತಾ (37) ಅವರು ಇಂದು ಸಂಗಾರೆಡ್ಡಿಯಲ್ಲಿ ನಡೆದ ಕಾರು ಅಪಘಾತದಲ್ಲಿ ದಾರುಣವಾಗಿ ಮರಣ ಹೊಂದಿದ್ದಾರೆ.
1986 ರಲ್ಲಿ ಹೈದರಾಬಾದ್ ನಲ್ಲಿ ಜನಿಸಿದ ಲಾಸ್ಯಾ ನಂದಿತಾ ಸುಮಾರು ಒಂದು ದಶಕದ ಹಿಂದೆ ರಾಜಕೀಯಕ್ಕೆ ಪ್ರವೇಶಿಸಿದ್ದರು. 2023 ರ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಸಿಕಂದರಾಬಾದ್ ಕಂಟೋನ್ ಮೆಂಟಿನಿಂದ ಶಾಸಕರಾಗಿ ಆಯ್ಕೆಯಾಗಿ ಉತ್ತಮ ಕಾರ್ಯ ಮಾಡಿದ್ದರು.
ಶಾಸಕಿಯಾಗುವ ಮೊದಲು ಅವರು ಕಾವಾಡಿಗುಡ ವಾರ್ಡ್ ನಲ್ಲಿ ಕಾರ್ಪೊರೇಟರ್ ಆಗಿ ಸೇವೆ ಸಲ್ಲಿಸಿದ್ದರು.
ಜಿಲ್ಲೆಯ ಅಮೀನ್‌ಪುರ ಮಂಡಲದ ಸುಲ್ತಾನ್ಪುರ ಹೊರ ವರ್ತುಲ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ವೇಗವಾಗಿ ಚಲಿಸಿದ್ದರಿಂದ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ.
ತೀವ್ರ ಗಾಯಗೊಂಡಿದ್ದ ಲಾಸ್ಯ ಅವರನ್ನು
ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತು.ಆದರೆ ಬಹಳ ರಕ್ತಸ್ರಾವ ಆಗಿದ್ದರಿಂದ ಅವರು ಮೃತಪಟ್ಟಿದ್ದಾರೆ,ಕಾರಿನ ಚಾಲಕ ಹಾಗೂ ಲಾಸ್ಯ ಅವರ ವೈಯಕ್ತಿಕ ಭದ್ರತಾ ಅಧಿಕಾರಿ ಗಾಯಗೊಂಡಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಲಾಸ್ಯಾ ನಂದಿತಾ ಅವರು ಬಸರಾದಿಂದ ಗಚ್ಚಿಬೌಲಿ ಕಡೆಗೆ ಪ್ರಯಾಣಿಸುತ್ತಿದ್ದರು. ಚಾಲಕ ನಿದ್ರೆ ಮಂಪರಿನಲ್ಲಿ ಕಾರು ಚಾಲನೆ ಮಾಡಿದ್ದರಿಂದ ಅಪಘಾತ ಸಂಭವಿಸರಬಹುದು ಎಂದು ಸಂಗಾರೆಡ್ಡಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಎಚ್.ರೂಪೇಶ್ ತಿಳಿಸಿದ್ದಾರೆ.