ಮಂಡ್ಯ,ಮೇ.28: ಮಂಡ್ಯ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಅಂಚೆ ಮತಪತ್ರಗಳ ಎಣಿಕೆಯನ್ನು ಜಾಗರೂಕತೆಯಿಂದ ನಡೆಸಿ ಎಂದು ಜಿಲ್ಲಾಧಿಕಾರಿ ಡಾ. ಕುಮಾರ್ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಅಂಚೆ ಮತ ಎಣಿಕೆ ಅಧಿಕಾರಿ ಸಿಬ್ಬಂದಿಗಳಿಗೆ ಆಯೋಜಿಸಲಾಗಿದ್ದ ಚುನಾವಣಾ ತರಬೇತಿ ವೇಳೆ ಮಾತನಾಡಿದರು.
ಅಂಚೆ ಮತ ಎಣಿಕೆ ಪ್ರಕ್ರಿಯೆಯಲ್ಲಿ ಒಟ್ಟು 11 ಟೇಬಲ್ ಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಟೇಬಲ್ ಗೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಅಂಚೆ ಮತ ಪತ್ರ ಎಣಿಕೆಯ ಸಹಾಯಕ ಚುನಾವಣಾ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.
ಅಂಚೆ ಮತ ಎಣಿಕೆಯು ಬಹಳ ಸೂಕ್ಷ್ಮವಾಗಿದ್ದು, ಎಲ್ಲಾ ಮತ ಎಣಿಕೆ ಅಧಿಕಾರಿಗಳು, ಮೇಲ್ವಿಚಾರಕರುಗಳು ಸಿಬ್ಬಂದಿಗಳು ಗಂಭೀರವಾಗಿ ಪರಿಗಣಿಸಿ ಸಂಪೂರ್ಣ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಮತ ಎಣಿಕೆಯ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳು ತರಬೇತಿಯಲ್ಲಿ ಸರಿಯಾದ ಸಲಹೆ ಹಾಗೂ ಮಾರ್ಗದರ್ಶನವನ್ನು ಪಡೆಯಿರಿ. ಮತ ಎಣಿಕೆಯ ದಿನದಂದು ಕೌಂಟಿಂಗ್ ಟೇಬಲ್ ನ ಸಂಖ್ಯೆ, ಅಧಿಕಾರಿ ಹೆಸರು, ಎಣಿಕೆ ಮೇಲ್ವಿಚಾರಕರ ಹೆಸರು, ನೀಡುವ ಪೋಸ್ಟಲ್ ಬ್ಯಾಲೆಟ್ ಬಂಡಲ್ ನ ಒಟ್ಟು ಸಂಖ್ಯೆಯನ್ನು ನೀಡಲಾಗುವ ನಮೂನೆಯಲ್ಲಿ ತಪ್ಪದೇ ನಮೂದಿಸಬೇಕು ಎಂದು ತಿಳಿಸಿದರು.
ಮತ ಎಣಿಕೆ ಮೇಲ್ವಿಚಾರಕರ ಜವಾಬ್ದಾರಿಯು ಬಹಳ ಮುಖ್ಯವಾಗಿದ್ದು, ಮತ ಎಣಿಕೆಯ ದಿನ ಎಲ್ಲಾ ಸಿಬ್ಬಂದಿಗಳು ನಿಗದಿಪಡಿಸುವ ಸಮಯಕ್ಕೆ ಸರಿಯಾಗಿ ಹಾಜರಿರಬೇಕು. ಮತ ಎಣಿಕೆಯನ್ನು ನಿಖರವಾಗಿ ನಮೂದಿಸಬೇಕು ಎಂದು ಕುಮಾರ್ ಸೂಚಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಕ್ ತನ್ವಿರ್ ಆಸೀಫ್, ಅಪರ ಜಿಲ್ಲಾಧಿಕಾರಿ ಡಾ. ಎಚ್. ಎಲ್. ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.