Fri. Mar 6th, 2026

ಇನ್ನೊಂದು ತಿಂಗಳಲ್ಲಿ ಜಾತಿಗಣತಿ ವರದಿ ಲಭ್ಯ: ಸಿಎಂ

Share this with Friends

ರಾಯಚೂರು: ಜಾತಿಗಣತಿ ವರದಿ ಇನ್ನೊಂದು ತಿಂಗಳ ಅವಧಿಯಲ್ಲಿ ಸಲ್ಲಿಕೆಯಾಗಲಿದ್ದು, ಸೂಕ್ತ ಚರ್ಚೆಯ ನಂತರ ಅಂಗೀಕರಿಸಿ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ದೇವದುರ್ಗದ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ತಿಂಥಣಿ ಬ್ರಿಡ್ಜ್ ವತಿಯಿಂದ ಆಯೋಜಿಸಲಾಗಿದ್ದ ಸಿದ್ದರಾಮಾನಂದಪುರಿ ಸ್ವಾಮೀಜಿಯವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ,ಕುರುಬ ಸಮುದಾಯವನ್ನು ಎಸ್ ಟಿ ಗೆ ಸೇರಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಳ್ಳಲಿದ್ದು, ರಾಜ್ಯ ಸರ್ಕಾರ ಈಗಾಗಲೇ ತನ್ನ ಶಿಫಾರಸ್ಸನ್ನು ಕೇಂದ್ರಕ್ಕೆ ಸಲ್ಲಿಸಿದೆ.ಕೇಂದ್ರದ ನಿರ್ಧಾರವನ್ನು ಕಾಯಲಾಗುತ್ತಿದೆ ಎಂದರು.

ಜನರ ಆರ್ಶೀವಾದದಿಂದ 8 ಬಾರಿ ಗೆದ್ದು, ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ನಾಡಿನ ಎಲ್ಲ ಜನರ ಪ್ರೀತಿಯಿಂದಲೇ ರಾಜಕೀಯದಲ್ಲಿಯೂ ಇಂದಿಗೂ ಬದುಕಿದ್ದೇನೆ. ಈ ಸಮಾಜದ ಪ್ರೀತಿಗೆ ಬೆಲೆಕಟ್ಟಲಾಗದು. ಧ್ವನಿಯಿಲ್ಲದವರ ಪರವಾಗಿ ಹೋರಾಡುವುದೇ ನನ್ನ ಪ್ರಥಮ ಕೆಲಸ ಎಂದರು.

ರಾಜ್ಯದಲ್ಲಿ ಕನಕಗುರುಪೀಠ ಜಾತ್ಯಾತೀತ ಪೀಠವಾಗಿ ಕೆಲಸ ಮಾಡುತ್ತಿದ್ದು, ಗುರುಪೀಠದಲ್ಲಿ ಪೂಜ್ಯ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿಯವರು ಶಿಕ್ಷಣ, ಆಧ್ಯಾತ್ಮ ಮತ್ತು ಜಾತ್ಯತೀತ ಮನೋಭಾವಕ್ಕೆ ಹೆಚ್ಚು ಒತ್ತು ನೀಡಿದ್ದರು. ಕುರುಬ ಸಮುದಾಯಕ್ಕೆ ಮೊದಲ ಬಾರಿಗೆ ಕಾಗಿನೆಲೆ ಗುರುಪೀಠ 1992 ರಲ್ಲಿ ಸ್ಥಾಪಿತವಾಗಿ, ಶ್ರೀ ತಾರಕಾನಂದ ಸ್ವಾಮೀಜಿಯವರು ಅದರ ಮೊದಲ ಗುರುಗಳಾಗಿದ್ದರು. ಕಲ್ಯಾಣ ಕರ್ನಾಟಕ, ಬೆಂಗಳೂರು, ಮೈಸೂರು ಮುಂಬಯಿ ಕರ್ನಾಟಕ ವಿಭಾಗಗಳಿದ್ದು, ಈ ಎಲ್ಲಾ ವಿಭಾಗಗಳಿಗೂ ಪ್ರತ್ಯೇಕ ಗುರುಗಳಿದ್ದು, ಈ ವಿಭಾಗಕ್ಕೆ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿಯವರು ಗುರುಗಳಾಗಿದ್ದರು. ಗುರುಪೀಠದಲ್ಲಿ ಶಿಕ್ಷಣ, ಆಧ್ಯಾತ್ಮ, ಜಾತ್ಯಾತೀತ ಮನೋಭಾವಕ್ಕೆ ಹೆಚ್ಚು ಒತ್ತು ನೀಡಿದರು. ಕಾಗಿನೆಲೆ ಗುರುಪೀಠ ಸ್ಥಾಪನೆಯ ಉದ್ದೇಶವೇ ಸಮಸಮಾಜ ನಿರ್ಮಾಣವಾಗಿದೆ. ಶ್ರೀಗಳ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬ ವರ್ಗ ಹಾಗೂ ಇಡೀ ಸಮಾಜಕ್ಕೆ ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ.ಕನಕದಾಸರು ‘ಕುಲಕುಲವೆಂದು ಹೊಡೆದಾಡದಿರಿ’ ಎಂದಂತೆ, ಬುದ್ಧ ಬಸವಾದಿ ಶರಣರು ಜಾತಿವ್ಯವಸ್ಥೆಯನ್ನು ವಿರೋಧಿಸುತ್ತಾ ಬಂದಿದ್ದಾರೆ. ನಮ್ಮ ಸಮಾಜ ವಿವಿಧ ಜಾತಿ, ಧರ್ಮ, ವರ್ಗ, ಭಾಷೆಗಳಿಂದ ಕೂಡಿದೆ. ಮನುಜರೆಲ್ಲರೂ ಒಂದೇ ಕುಟುಂಬ ಎಂದು ಭಾವಿಸಬೇಕು. ಸಾಮಾಜಿಕ ಚಿಂತಕರಾದ ಲೋಹಿಯಾ ಅವರು ಮುಂದುವರಿದ ಜಾತಿಯವರು ಸಮಾಜವನ್ನು ದಾರಿತಪ್ಪಿಸುವ ಕೆಲಸವನ್ನು ಮಾಡುತ್ತಾರೆ ಎಂದಿದ್ದರು. ಸಮಾನ ಅವಕಾಶವಿರುವ ಸಮಸಮಾಜವನ್ನು ನಿರ್ಮಿಸುವುದು ಅವಶ್ಯಕ ಎಂದರು

ಕೆಲವರು ಶಿಕ್ಷಣ ದೊರೆತರೂ ಗುಲಾಮಗಿರಿಯ ಮನಸ್ಥಿತಿಯಿಂದ ಹೊರಬಂದಿಲ್ಲ. ಸ್ವಾಭಿಮಾನಿಗಳಾಗಿ ಬದುಕುವುದು ಮುಖ್ಯ. ವೈಚಾರಿಕ ಮತ್ತು ವೈಜ್ಞಾನಿಕ ಶಿಕ್ಷಣ ಪಡೆದ ಯುವಪೀಳಿಗೆ ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಶೇ. 15 ರಷ್ಟಿದ್ದ ಶಿಕ್ಷಣ ಈಗ ಶೇ.76 ಆಗಿದ್ದರೂ, ನಮ್ಮಲ್ಲಿ ಜಾತಿವ್ಯವಸ್ಥೆ ನಶಿಸಿಲ್ಲ. ಜಡತ್ವದಿಂದ ಕೂಡಿದ ಸಮಾಜಕ್ಕೆ ಚಲನೆ ಬರಲು ಆರ್ಥಿಕ , ಸಾಮಾಜಿಕ ಸಮಾನತೆ ಬೇಕು. ಸಮಾಜದ ಮೌಢ್ಯಗಳನ್ನು ಅಳಿಸುವ ಕಾರ್ಯದಲ್ಲಿ ಸ್ವಾಮೀಜಿಯವರು ತೊಡಗಿದ್ದರು. ಇಡೀ ರಾಜ್ಯಕ್ಕೆ ಕನಕಗುರುಪೀಠ ಜಾತ್ಯಾತೀತ ಪೀಠವಾಗಿ ಕೆಲಸ ಮಾಡುತ್ತಿದೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ವಸತಿ ನಿಲಯ, ಯಾತ್ರಿನಿವಾಸ ಸೇರಿದಂತೆ ಹಲವು ಬೇಡಿಕೆಗಳಿಗೆ ಅನುದಾನ ನೀಡಲಾಗುವುದು. ಎಲ್ಲ ದಲಿತ ಹಾಗೂ ಹಿಂದುಳಿದ ವರ್ಗಗಳ ಮಠಗಳಿಗೆ ಬೆಂಗಳೂರಿನಲ್ಲಿ ಸುಮಾರು 50 ಎಕರೆ ಪ್ರದೇಶವನ್ನು ನೀಡಲು ಇತ್ತೀಚೆಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದರು.


Share this with Friends

Related Post