ಬೆಂಗಳೂರು. ಮಾ.2 : ಬೆಂಗಳೂರು ಸೇರಿದಂತೆ ರಾಜ್ಯವನ್ನೇ ಬೆಚ್ಚಿ ಬೀಳಿಸಿರುವ ರಾಮೇಶ್ವರಂ ಕೆಫೆ ಸ್ಫೋಟದ ತನಿಖೆ ಚುರುಕುಗೊಂಡಿದ್ದು, ಪ್ರಕರಣದ ಹಿಂದಿನ ರೂವಾರಿಯ ಚಹರೆ ಸಿಸಿಟಿವಿ ಕ್ಯಾಮೆರಾದಲ್ಲಿ ಪತ್ತೆಯಾಗಿದೆ. ಮಾಸ್ಕ್, ಕನ್ನಡಕ ಮತ್ತು ಕನ್ನಡಕ ಧರಿಸಿ ಮುಖ ಮುಚ್ಚಿಕೊಂಡಿದ್ದ ಪ್ರಮುಖ ಆರೋಪಿಯ ಚಲನವನಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆತ ಕೆಫೆಯಲ್ಲಿ ರವೆ ಇಡ್ಲಿ ಖರೀದಿಸಿದ್ದ ಎನ್ನಲಾಗಿದೆ.
ಕಫೆಯಲ್ಲಿರುವ ಸಿಸಿಟಿವಿ ಆಧಾರದ ಮೇಲೆ ವ್ಯಕ್ತಿಯನ್ನು ಗುರುತಿಸಲಾಗಿದೆ. ಶಂಕಿತ ವ್ಯಕ್ತಿ ಡೆನಿಮ್ ಧರಿಸಿದ್ದು, ತಲೆಗೆ ಟೊಪಿ ಹಾಗೂ ಮಾಸ್ಕ್ ಹಾಕಿದ್ದ, ಕೈಯಲ್ಲಿ ತಟ್ಟೆಯಲ್ಲಿ ಇಡ್ಲಿಯನ್ನು ತಿನ್ನಲಿಕ್ಕೆ ತೆಗೆದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಟೋಕನ್ ತೆಗೆದುಕೊಂಡ ಶಂಕಿತ ರವೆ ಇಡ್ಲಿ ತಿಂದು ಹ್ಯಾಡ್ ವಾಶಿಂಗ್‌ಗೆ ಹೋಗಿದ್ದಾನೆ. ಹ್ಯಾಂಡ್ ವಾಶ್ ಮಾಡಿ ಬ್ಯಾಗ್ ಅಲ್ಲೇ ಇಟ್ಟು ಬೈಕ್‌ನಲ್ಲಿ ತೆರಳಿದ್ದಾನೆ. ಆತ ಹೋದ ಸುಮಾರು ಒಂದು ಗಂಟೆಯ ಬಳಿಕ ಈ ಬ್ಯಾಗ್ ಬ್ಲಾಸ್ಟ್ ಆಗಿದೆ. ಸದ್ಯ ಬೈಕ್ ಮಾಲೀಕ ಯಾರು..? ಬೈಕ್ ಎಲ್ಲಿನದ್ದು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇನ್ನೊಂದೆಡೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ನಾಲ್ವರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಲ್ವರನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.ಗುಪ್ತಚರ ಇಲಾಖೆ ಅಧಿಕಾರಿಗಳು ನಾಲ್ವರ ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿಯು ಬಾಂಬ್ ಇದ್ದ ಬ್ಯಾಗನ್ನು ಕೆಫೆಯೊಳಗೆ ಇಟ್ಟು ಬಾಂಬ್ ಸ್ಪೋಟವಾಗುವ ಮೊದಲು ಕೆಫೆಯಿಂದ ಹೊರ ನಡೆದಿದ್ದ. ಇದೇ ವೇಳೆ, ಮಡಿವಾಳದ ಟೆಕ್ನಿಕಲ್ ಸೆಂಟರ್’ನಲ್ಲಿ ಬೇರೆ ಬೇರೆ ಸ್ಥಳದಲ್ಲಿರಿಸಿ ಮೂವರನ್ನೂ ಸಿಸಿಬಿ ವಿಚಾರಣೆ ನಡೆಸುತ್ತಿದೆ. ಸ್ಪೋಟಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿಗಳನ್ನು ಸಿಸಿಬಿ ಕಲೆ ಹಾಕುತ್ತಿದ್ದು, ಓರ್ವನನ್ನು ಡಿಜೆ ಹಳ್ಳಿಯಿಂದ ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.
ಇನ್ನು, ಪ್ರಕರಣದ ಉಗ್ರ ಬಿಎಂಟಿಸಿ ಬಸ್’ನಲ್ಲಿ ಓಡಾಡಿದ್ದ ಎನ್ನಲಾಗಿದ್ದು, ಈ ಸಂಬಂಧ ಬಿಎಂಟಿಸಿ ಅಧಿಕಾರಿಗಳಿಂದ ಪೊಲೀಸ್ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ. ಶಂಕಿತ ಓಡಾಡಿರುವ ಬಿಎಂಟಿಸಿ ಬಸ್ ಆಧರಿಸಿ ಸಿಸಿ ಟಿವಿ ವೀಡಿಯೋಗಳನ್ನು ಕೊಡುವಂತೆ ಬಿಎಂಟಿಸಿಯ ಭದ್ರತೆ ವಿಭಾಗಕ್ಕೆ ಪೊಲೀಸರು ಮನವಿ ಮಾಡಿದ್ದಾರೆ.
ಜನನಿಬಿಡ ಪ್ರದೇಶಗಳಲ್ಲಿ ಅನುಮಾನಾಸ್ಪದವಾಗಿ ಓಡಾಡುವವರು ಹಾಗೂ ಅನುಮಾನಾಸ್ಪದ ವಸ್ತುಗಳ ಬಗ್ಗೆ ನಿಗಾವಹಿಸಿದ್ದಾರೆ. ಅಂತೆಯೇ ಪೊಲೀಸರ ಗಸ್ತು ಹೆಚ್ಚಿಸಿ, ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಕಣ್ಣಿಡಲಾಗಿದೆ. ಇನ್ನು ಬಸ್ ನಿಲ್ದಾಣಗಳು ಹಾಗೂ ರೈಲು ನಿಲ್ದಾಣಗಳಲ್ಲಿ ಅನುಮಾನಾಸ್ಪವಾಗಿ ಕಂಡುಬರುವ ಲಗೇಜ್ ತಪಾಸಣೆ ಮಾಡಲು ಸೂಚಿಸಲಾಗಿದೆ.