ಮೈಸೂರು, ಏ. 25: ಇದೇ ಮೊದಲ ಬಾರಿಗೆ ಮತದಾನ ಮಾಡುವವರು ಅದರ ನೆನಪಿಗಾಗಿ ಗಿಡ ನೆಟ್ಟು ಹಬ್ಬದಂತೆ ಸಂಭ್ರಮಿಸಿ ಎಂದು ಪ್ರಾಂಶುಪಾಲ ದಿನೇಶ್ ಕರೆ ನೀಡಿದ್ದಾರೆ.
ಮೊದಲ ಮತದಾನದ ನೆನಪಿಗಾಗಿ ಪ್ರತಿಯೊಬ್ಬರು ಗಿಡವನ್ನು ನೆಡುವ ಮೂಲಕ ಹಬ್ಬದ ರೀತಿಯಲ್ಲಿ ಚುನಾವಣೆಯನ್ನು ಆಚರಿಸಬೇಕು ಎಂದು ನಂಜನಗೂಡು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾಗಿರುವ ಲಯನ್ ಸಿ.ಆರ್ .ದಿನೇಶ್ ಸಲಹೆ ನೀಡಿದ್ದಾರೆ.
ಸೃಜನ್ ದಿನೇಶ್ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಮತದಾನ ಮಾಡಿ ಅದರ ನೆನಪಿಗಾಗಿ ತಮ್ಮ ಮನೆ ಆವರಣದಲ್ಲಿ ಸಂಪಿಗೆ ಗಿಡ ನೆಟ್ಟು ಸಂಭ್ರಮಿಸಿದ್ದಾರೆ,ಜತೆಗೆ ಅದಕ್ಕೆ ನೀರು ಹಾಕಿ ಪೋಷಿಸಿ ಪರಿಸರ ಪ್ರೇಮ ಮೆರೆದಿದ್ದಾರೆ ಎಂದು ಉದಾಹರಣೆ ಕೂಡಾ ಕೊಟ್ಟಿದ್ದಾರೆ.
ಈಗ ಲೋಕಸಭಾ ಚುನಾವಣೆ ಬಂದಿದೆ. ವಿಧಾನಸಭಾ ಚುನಾವಣಾ ದಿನ ಸೃಜನ್ ಹಾಕಿದ ಗಿಡ ಈಗ ದೊಡ್ಡದಾಗಿ ಬೆಳೆದಿದೆ.
ಈ ಚುನಾವಣೆಯಲ್ಲಿ ಯಾರು ಮೊದಲ ಮತದಾನ ಮಾಡುವಿರೊ ಅವರೆಲ್ಲರೂ ಕಡ್ಡಾಯವಾಗಿ ತಮ್ಮ ಮನೆಯ ಆವರಣ ಅಥವಾ ರಸ್ತೆ ಬದಿ ಒಂದು ಗಿಡವನ್ನು ನೆಟ್ಟು ಆ ಗಿಡವನ್ನು ಪೋಷಿಸುವುದು ಅತ್ಯುತ್ತಮ. ಜತೆಗೆ ಗಿಡ ನೆಟ್ಟು ಪೊಷಿಸುವುದು ಎಲ್ಲರ ಆಧ್ಯ ಕರ್ತವ್ಯ ಎಂದು ಪ್ರಾಂಶುಪಾಲರು ಹೇಳಿದ್ದಾರೆ.
ಪ್ರಸ್ತುತ ಸನ್ನಿವೇಶದಲ್ಲಿ ಪ್ರಕೃತಿ ಎಷ್ಟು ಮುಖ್ಯ ಎಂಬುದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ, ಭಾರತದ ಬಹುದೊಡ್ಡ ಪ್ರಜಾಪ್ರಭುತ್ವದಲ್ಲಿ ಕಡ್ಡಾಯವಾಗಿ ಮತ ಹಾಕುವ ಮೂಲಕ ಸದೃಢ ರಾಷ್ಟ್ರವನ್ನು ನಿರ್ಮಾಣ ಮಾಡುವ ಜೊತೆಗೆ ನಮ್ಮ ಪರಿಸರವನ್ನು ಮುಂದಿನ ತಲೆಮಾರಿಗೆ ಕಾದುಕೊಳ್ಳೋಣ ಎಂದು ಲಯನ್ ಸಿ.ಆರ್ .ದಿನೇಶ್ ತಿಳಿಸಿದ್ದಾರೆ.
.