Wed. Mar 11th, 2026

ಕೆಇಎ ಪರೀಕ್ಷಾ ಪಾರದರ್ಶಕತೆಗೆ ಕೇಂದ್ರದ ಮೆಚ್ಚುಗೆ

Share this with Friends

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಪರೀಕ್ಷಾ ಪಾರದರ್ಶಕತೆಗಾಗಿ ಅಳವಡಿಸಿಕೊಂಡಿರುವ ಸುಧಾರಿತ ತಂತ್ರಜ್ಞಾನಗಳ ಕುರಿತು ಅಧ್ಯಯನ ನಡೆಸಲು ಕೇಂದ್ರ ಸರ್ಕಾರದ ಉನ್ನತ ಮಟ್ಟದ ನಿಯೋಗವು ಬುಧವಾರ ಪ್ರಾಧಿಕಾರಕ್ಕೆ ಭೇಟಿ ನೀಡಿತು.

ವೆಬ್‌ಕಾಸ್ಟಿಂಗ್ ಮತ್ತು ಅಭ್ಯರ್ಥಿಗಳ ಮುಖ ಚಹರೆ ಗುರುತಿಸುವ ತಂತ್ರಜ್ಞಾನವನ್ನು ಕೆಇಎ ಯಶಸ್ವಿಯಾಗಿ ಬಳಸುತ್ತಿರುವುದನ್ನು ವೀಕ್ಷಿಸಿದ ನಿಯೋಗವು, ಈ ನಾವೀನ್ಯತೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತು. ಕೇಂದ್ರ ಸರ್ಕಾರದ ಉಪ ಕಾರ್ಯದರ್ಶಿಗಳಾದ ರಮಣ್ ಕುಮಾರ್ ಹಾಗೂ ಕೆ. ಮನೋಜ್ ಮತ್ತು ಚಿತ್ರದುರ್ಗ ಜಿ.ಪಂ. ಸಿಇಒ ಡಾ. ಆಕಾಶ್ ಅವರು ಈ ತಂಡದಲ್ಲಿದ್ದರು.

ಅಕ್ರಮಕ್ಕೆ ತಡೆ: ಪ್ರಾತ್ಯಕ್ಷಿಕೆ ವೀಕ್ಷಣೆ

ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ನಿಯೋಗಕ್ಕೆ ಪರೀಕ್ಷಾ ಪ್ರಕ್ರಿಯೆಯ ಕುರಿತು ವಿವರವಾದ ಪ್ರಾತ್ಯಕ್ಷಿಕೆ ನೀಡಿದರು. ಅಭ್ಯರ್ಥಿಗಳ ತಪಾಸಣೆ, ಹಾಜರಾತಿ ದಾಖಲಿಸುವಿಕೆ, ಮುಖ ಚಹರೆ ಪತ್ತೆ (Facial Recognition) ಮೂಲಕ ನಕಲಿ ಅಭ್ಯರ್ಥಿಗಳ ತಡೆ, ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್ ಮತ್ತು ಫಲಿತಾಂಶ ಪ್ರಕಟಣೆಯವರೆಗಿನ ಹಂತಗಳನ್ನು ಅಧಿಕಾರಿಗಳು ಕೂಲಂಕಷವಾಗಿ ವೀಕ್ಷಿಸಿದರು.

ರಾಷ್ಟ್ರೀಯ ಮಟ್ಟದಲ್ಲಿ ಅಳವಡಿಕೆ ಸಾಧ್ಯತೆ:

ವಿವಿಧ ರಾಜ್ಯಗಳ ಪರೀಕ್ಷಾ ವ್ಯವಸ್ಥೆಗಳನ್ನು ಕೇಂದ್ರದ ತಂಡವು ಅಧ್ಯಯನ ಮಾಡುತ್ತಿದ್ದು, ರಾಷ್ಟ್ರ ಮಟ್ಟದಲ್ಲಿ ಏಕರೂಪದ ಪರೀಕ್ಷಾ ನೀತಿಯನ್ನು ರೂಪಿಸುವ ಸಂದರ್ಭದಲ್ಲಿ ಕರ್ನಾಟಕದ ಈ ಮಾದರಿಗಳನ್ನು ಅಳವಡಿಸಿಕೊಳ್ಳುವ ಉದ್ದೇಶವನ್ನು ನಿಯೋಗ ಹೊಂದಿದೆ ಎಂದು ಮೂಲಗಳು ತಿಳಿಸಿವೆ.

 


Share this with Friends

Related Post