Fri. Nov 1st, 2024

ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮವಹಿಸಲು ಸಿಇಒ ಗಾಯಿತ್ರಿ ಸೂಚನೆ

Share this with Friends

ಮೈಸೂರು ಫೆ.29: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲೂ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಜಿಪಂ ಸಿಇಒ ಕೆ .ಎಂ.ಗಾಯಿತ್ರಿ
ಸೂಚಿಸಿದ್ದಾರೆ.

ಟಿ.ನರಸೀಪುರ ತಾಲ್ಲೂಕು ಸೋಮನಾಥಪುರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರ‌ ಸಭೆಯಲ್ಲಿ ಕುಡಿಯುವ ನೀರಿನ ಕುರಿತು ಚರ್ಚಿಸಿದರು.

ಬಾಕಿ ಇರುವ ಜಲ ಜೀವನ್ ಮಿಷನ್ ಕಾಮಗಾರಿಗಳನ್ನು ಮುಂದಿನ ಒಂದು ತಿಂಗಳೊಳಗೆ ಪೂರ್ಣಗೊಳಿಸುವಂತೆ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರ್ ಗಳಿಗೆ ಸೂಚಿಸಿದರು.

ಮಾರ್ಚ್ 3 ರಂದು ನಡೆಯುವ ಪಲ್ಸ್ ಪೋಲಿಯೋ ಕಾರ್ಯಕ್ರಮ‌ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಬೇಕೆಂದು ವೈದ್ಯಾಧಿಕಾರಿಗಳಿಗೆ ಗಾಯಿತ್ರಿ ನಿರ್ದೇಶನ ನೀಡಿದರು.

ನರೇಗಾ ಯೋಜನೆಯಡಿ ಸಮುದಾಯ ಕಾಮಗಾರಿಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಹೆಚ್ಚಿನ ಜನರಿಗೆ ಉದ್ಯೋಗವನ್ನು ಕಲ್ಪಿಸಿಕೊಡಿ ಹಾಗೂ ಕಾಮಗಾರಿಗಳಲ್ಲಿ ಮಹಿಳೆಯರು ಹೆಚ್ಚಾಗಿ ಭಾಗವಹಿಸುವಂತೆ ಅರಿವು ಮೂಡಿಸಿ ಎಂದು ತಿಳಿಸಿದರು.

ತೆರಿಗೆ ವಸೂಲಾತಿಯನ್ನು ಕಡ್ಡಾಯವಾಗಿ ಪಿ ಓ ಎಸ್ ಮಿಷನ್ ಬಳಸಿ ಸಂಗ್ರಹಿಸಬೇಕು. ಬಾಕಿ ಇರುವ ತೆರಿಗೆಯನ್ನು ಸಂಪೂರ್ಣವಾಗಿ ವಸೂಲಾತಿ ಮಾಡಲು ಸೂಚಿಸಿದರು.

ಸಂಜೀವಿನಿ ಸಂಘದವರಿಂದ ತಯಾರಾದ ಸಾಂಬಾರು ಪುಡಿ ಮತ್ತು ಉಪ್ಪಿನಕಾಯಿಗಳನ್ನು ಮಾರಾಟ ಮಾಡಲು ಅನುಕೂಲವಾಗುವಂತೆ ಅಂಗಡಿ ವ್ಯವಸ್ಥೆಯನ್ನು ಮಾಡಿ ಕೊಡುವಂತೆ ಪಿ ಡಿ ಒ ಗಳಿಗೆ ಸೂಚಿಸಿದರು.

ಸಭೆಯಲ್ಲಿ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ. ಸಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಕೈಲಾಶ್ ಮೂರ್ತಿ, ಎಇ ಮಂಜುನಾಥ್, ಪಿಆರ್‌ ಇಡಿ ಎಇಇ ಚರಿತ, ಪಿಡಿಒ ಶಶಿಕುಮಾರ್, ಕಾರ್ಯದರ್ಶಿ ಸುಧೀರ್, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರುಗಳು ಮತ್ತಿತರರು ಹಾಜರಿದ್ದರು.


Share this with Friends

Related Post