Fri. Nov 1st, 2024

ನದಿ ಪಾತ್ರ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಸಿಇಒ ಗಾಯತ್ರಿ

Share this with Friends

ಮೈಸೂರು, ಜು.26: ಸತತ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಕೆ.ಎಂ ಗಾಯಿತ್ರಿ ಮತ್ತು ಅಧಿಕಾರಿಗಳು ನದಿ ಪಾತ್ರ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಟಿ. ನರಸೀಪುರ ತಾಲ್ಲೂಕಿನ ಬೆನಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಡಗನಕೊಪ್ಪಲು, ಕಲಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಡಿಮಾಲಂಗಿ ಹಾಗೂ ಹೆಮ್ಮಿಗೆ ಗ್ರಾಮಗಳ ನದಿ ಪಾತ್ರ ಸ್ಥಳಗಳಿಗೆ ಭೇಟಿ ನೀಡಿದರು.

ನದಿ ಪಾತ್ರದಲ್ಲಿ ಇರುವ ಮನೆಗಳಿಗೆ ಭೇಟಿ ನೀಡಿ ಗ್ರಾಮಸ್ಥರನ್ನು ಮಾತನಾಡಿಸಿ ಪ್ರವಾಹ ಸಂದರ್ಭದಲ್ಲಿ ಎಚ್ಚರಿಕೆ ಯಿಂದ ಇರಬೇಕು ಹಾಗೂ ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ತಿಳಿಸಿದರು.

ಸ್ಥಳೀಯ ಪರಿಸ್ಥಿತಿಯನ್ನಾಧರಿಸಿ ಜನ,ಜಾನುವಾರುಗಳ ಸ್ಥಳಾಂತರ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಗಾಯಿತ್ರಿ ಸೂಚಿಸಿದರು.

ಜಲ್ ಜೀವನ್ ಮಿಷಿನ್ ಯೋಜನೆ ಅನುಷ್ಠಾನದ ಬಗ್ಗೆ ಮನೆ-ಮನೆಗಳಿಗೆ ನಳ ಸಂಪರ್ಕ ನೀಡಿರುವುದನ್ನು ಇದೇ ವೇಳೆ ಪರಿಶೀಲಿಸಿದರು.ನಂತರ ಕಲಿಯೂರು ಗ್ರಾ.ಪಂ ಗ್ರಂಥಾಲಯಕ್ಕೆ ಬೇಟಿ ನೀಡಿದರು.

ಕಲಿಯೂರು ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಸಿಬ್ಬಂದಿಗಳ ಹಾಜರಾತಿ, ತೆರಿಗೆ ಸಂಗ್ರಹಣೆ, ಆಸ್ತಿಗಳ ಸರ್ವೇ, ಬೂದು ನೀರು ನಿರ್ವಹಣೆ, ಮನರೇಗಾ ಯೋಜನೆ, ಜೆ ಜೆ ಎಮ್ ಯೋಜನೆ ಅನುಷ್ಠಾನ ಕುರಿತು ಅಧ್ಯಕ್ಷರು, ಉಪಾದ್ಯಕ್ಷರು , ಸದಸ್ಯರು, ಪಿಡಿಒಗಳ ಜೊತೆ ಸಭೆ ನಡೆಸಿದರು.

ನಂತರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೂ ಗಾಯತ್ರಿ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಬಿಸಿ ಊಟ ವಿತರಣೆ ಬಗ್ಗೆ ಶಾಲಾ ಮೂಲಭೂತ ಸೌಕರ್ಯಗಳ ಪರಿಶೀಲನೆ ನಡೆಸಿದರು.

ಇದೇ ವೇಳೆ ಕಲಿಯೂರು ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಭಿವೃದ್ಧಿ ಹೊಂದುತ್ತಿರುವ ಚಿಕ್ಕ ಕೆರೆ ಹೂಳೆತ್ತುವ ಕಾಮಗಾರಿ ಪರಿಶೀಲನೆ ಮಾಡಿ ಮನರೇಗಾ ಕೂಲಿ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು.

ಕುಡಿಯುವ ನೀರಿನ ಘಟಕಗಳ ಸುತ್ತಲು ಸ್ವಚ್ಛತೆ ಕಾಪಾಡಬೇಕು, ಎಲ್ಲೂ ನೀರು ನಿಲ್ಲದಂತೆ ಎಚ್ಚರವಹಿಸಬೇಕು, ಕಾಲ ಕಾಲಕ್ಕೆ ಕುಡಿಯುವ ನೀರಿನ ಪರೀಕ್ಷೆ ಮಾಡಬೇಕು ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಮೇಘಲಾ, ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ, ಕಾರ್ಯಪಾಲಕ ಅಭಿಯಂತರ ರಂಜಿತ್,ಸಹಾಯಕ ಕಾರ್ಯಪಾಲಕ ಅಭಿಯಂತ ಕೈಲಾಶ್ ಮೂರ್ತಿ,ಸಹಾಯಕ ನಿರ್ದೇಶಕ ಶಶಿಕುಮಾರ್, ತಾ ಪಂ ಯೋಜನಾಧಿಕಾರಿ ರಂಗಸ್ವಾಮಿ,ಪಿಡಿಒ ಗಾಯಿತ್ರಿ, ಶೈಲಜಾ, ಚಿದಾನಂದ ಮತ್ತಿತರರು ಹಾಜರಿದ್ದರು.


Share this with Friends

Related Post