ಬೆಂಗಳೂರು:ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶ ಸಲುವಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಯುಜಿಸಿಇಟಿ-2026) ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ತಮ್ಮ ಅರ್ಜಿಯಲ್ಲಿ ಇನ್ನೇನಾದರೂ ಲೋಪಗಳು ಇದ್ದಲ್ಲಿ ಅವುಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಮಾರ್ಚ್ 30ರವರೆಗೆ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ತಿಳಿಸಿದ್ದಾರೆ.
ಸದ್ಯ ಅರ್ಜಿ ಸಲ್ಲಿಸಲು ಫೆ.27ರವರೆಗೆ ಅವಕಾಶ ಇದೆ. ಶುಲ್ಕ ಪಾವತಿಗೆ ಮಾರ್ಚ್ 3 ಕೊನೆ ದಿನ. ಈ ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿದವರು ಅಗತ್ಯ ಇದ್ದರೆ ತಿದ್ದುಪಡಿ ಮಾಡಿಕೊಳ್ಳಬಹುದು. ಆದರೆ, ಅರ್ಜಿ ಸಲ್ಲಿಕೆಯ ದಿನಾಂಕದಲ್ಲಿ ಯಾವುದೇ ವಿಸ್ತರಣೆ ಇರುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಅರ್ಜಿಯಲ್ಲಿ ತಿದ್ದುಪಡಿಗಳನ್ನು ಮಾಡಿದ ನಂತರ ಸಬ್ಮಿಟ್ ಮಾಡುವ ಹಂತದಲ್ಲಿನ ಮಾಹಿತಿಗಳು ಸರ್ವರ್ ನಲ್ಲಿ ಸೇವ್ ಆಗುತ್ತವೆ. ಹೀಗಾಗಿ, ವಿದ್ಯಾರ್ಥಿಗಳು ಪೋಷಕರೊಡನೆ ಸೂಕ್ತ ಸಮಾಲೋಚನೆ ನಡೆಸಿ ತಿದ್ದುಪಡಿಗಳನ್ನು ಮಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಎಸ್ ಸಿ ಒಳಮೀಸಲಾತಿ ಆರ್ ಡಿ ಕಡ್ಡಾಯ:
ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಆರ್ ಡಿ ಸಂಖ್ಯೆ ಇರುವ ಪ್ರವರ್ಗ-ಎ, ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಎಂದು ಮುದ್ರಿತವಾಗಿರುವ ಪ್ರಮಾಣ ಪತ್ರವನ್ನು ಸಂಬಂಧಿಸಿದ ತಹಶೀಲ್ದಾರರಿಂದ ಪಡೆದು ಅರ್ಜಿಯ ಪೋರ್ಟಲ್ ನಲ್ಲಿ ಎಡಿಟಿಂಗ್ ಮಾಡುವ ಮೂಲಕ ಆರ್ ಡಿ ಸಂಖ್ಯೆಯನ್ನು ದಾಖಲಿಸಬೇಕು. ಇದಕ್ಕೂ ಮಾರ್ಚ್ 30ರವರೆಗೆ ಸಮಯ ನೀಡಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಸದ್ಯ 40 ಸಾವಿರ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಅದರಲ್ಲಿ ಕೇವಲ 20 ಸಾವಿರ ಅಭ್ಯರ್ಥಿಗಳು ಮಾತ್ರ ಒಳ ಮೀಸಲಾತಿ ಪ್ರಕಾರ ಪ್ರವರ್ಗಗಳ ಆರ್ ಡಿ ಸಂಖ್ಯೆಯನ್ನು ದಾಖಲಿಸಿದ್ದಾರೆ. ಇನ್ನೂ 20 ಸಾವಿರ ಮಂದಿ ಈ ಹಿಂದಿನ ಹಾಗೂ ಕೇವಲ ಪರಿಶಿಷ್ಟ ಜಾತಿ ಎಂದು ನಮೂದಾಗಿರುವ ಆರ್ ಡಿ ಸಂಖ್ಯೆ ನಮೂದಿಸಿದ್ದಾರೆ. ಹೀಗಾಗಿ ಇದುವರೆಗೂ ಒಳ ಮೀಸಲಾತಿ ಪ್ರಕಾರ ಪ್ರಮಾಣ ಪತ್ರ ಪಡೆಯದವರು ಈ ತಕ್ಷಣ ತಹಶೀಲ್ದಾರ್
ಅವರಿಂದ ಪಡೆದು, ಹೊಸ ಆರ್ ಡಿ ಸಂಖ್ಯೆಯನ್ನು ದಾಖಲಿಸಬೇಕು. ಒಳ ಮೀಸಲಾತಿ ಪ್ರಕಾರ ಪ್ರವರ್ಗಗಳ ಆರ್ ಡಿ ಸಂಖ್ಯೆ ನಮೂದಿಸಿದವರನ್ನು ಮಾತ್ರ ಸೀಟು ಹಂಚಿಕೆಗೆ ಪರಿಗಣಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ನೀಟ್ ಪರೀಕ್ಷೆಗೆ ಪ್ರತ್ಯೇಕ ಅರ್ಜಿ:
ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್ ಗಳ ಪ್ರವೇಶಕ್ಕೆ ಎನ್ ಟಿ ಎ ನಡೆಸುವ ನೀಟ್ ಪರೀಕ್ಷೆಯ ಅಂಕಗಳನ್ನೇ ಮಾನದಂಡವಾಗಿ ಪರಿಗಣಿಸುತ್ತದೆ. ಹೀಗಾಗಿ ಈ ಕೋರ್ಸ್ ವ್ಯಾಸಂಗ ಮಾಡಲಿಚ್ವಿಸುವವರು ಎನ್ ಟಿ ಎ ಗೂ ಪ್ರತ್ಯೇಕ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಎನ್ ಟಿ ಎ ನೀಟ್ ಪರೀಕ್ಷೆ ನಡೆಸಿದರೂ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಕೆಇಎ ಮೂಲಕ ಮಾಡಲಾಗುತ್ತದೆ. ಹೀಗಾಗಿ ನೀಟ್ ಗೆ ಪ್ರತ್ಯೇಕ ಅರ್ಜಿ ಸಲ್ಲಿಸುವವರು ರಾಜ್ಯದಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಪಡೆಯಬೇಕಿದ್ದರೆ ಕಡ್ಡಾಯವಾಗಿ ಕೆಇಎ ನಲ್ಲಿ ಅರ್ಜಿ ಸಲ್ಲಿಸಿ, ನೋಂದಣಿ ಮಾಡಿರಬೇಕು. ನೀಟ್ ಫಲಿತಾಂಶ ಬಂದ ನಂತರ ನೀಟ್ ರೋಲ್ ನಂಬರ್ ಅನ್ನು ಸಿಇಟಿ ಅರ್ಜಿಯೊಂದಿಗೆ ಲಿಂಕ್ ಮಾಡಲು ಅವಕಾಶ ನೀಡಲಾಗುವುದು. ಈ ವಿಷಯದಲ್ಲಿ ಯಾವುದೇ ಗೊಂದಲ ಬೇಡ ಎಂದು ಅವರು ಹೇಳಿದ್ದಾರೆ.

