Mon. Dec 23rd, 2024

ಸಸ್ಪೆಂಡ್ ಆದ ಪೊಲೀಸ್ ಪೇದೆಗೂ ಮುಖ್ಯ ಮಂತ್ರಿ ಪದಕ !

Share this with Friends

ಮೈಸೂರು,ಆ.16: ಆರೋಪಗಳ ಹಿನ್ನಲೆ ಅಮಾನತಾದ ಮೈಸೂರು ಸಿಸಿಬಿ ಘಟಕದ ಮುಖ್ಯಪೇದೆಗೆ ಮುಖ್ಯಮಂತ್ರಿ ಪದಕ ಘೋಷಿಸಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ‌ ಗ್ರಾಸ‌ ಒದಗಿಸಿದೆ.

ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಜೊತೆ ಸಂಪರ್ಕ,ಸಾರ್ವಜನಿಕರ ಆಸ್ತಿ ಕಳವಿಗೆ ಪರೋಕ್ಷ ಸಹಾಯ,ದಾಖಲೆಗಳ ಸೋರಿಕೆ ಮಾಡಿರುವ ಶಂಕೆ ಮುಂತಾದ ಆರೋಪಗಳ ಹಿನ್ನಲೆಯಲ್ಲಿ ಅಮಾನತಾದ ಮೈಸೂರು ಸಿಸಿಬಿ ಘಟಕದ ಮುಖ್ಯಪೇದೆಗೆ ಮುಖ್ಯಮಂತ್ರಿ ಪದಕ ಘೋಷಿಸಲಾಗಿದೆ.

ಒಂದು ತಿಂಗಳ ಹಿಂದೆ ಅಮಾನತಾದರೂ ಇದೀಗ ಬಿಡುಗಡೆಯಾದ ಮುಖ್ಯಮಂತ್ರಿಗಳ ಪದಕದ ಪಟ್ಟಿಯಲ್ಲಿ ಮುಖ್ಯಪೇದೆ ಸಲೀಂ ಪಾಷಾ ಹೆಸರು ಪ್ರಕಟವಾಗಿರುವುದು ಅಚ್ಚರಿಗೆ ಕಾರಣವಾಗಿದೆ,ಜತೆಗೆ‌ ಚರ್ಚೆಯನ್ನೂ ಹುಟ್ಟುಹಾಕಿದೆ.

2023 ನೇ ಸಾಲಿಗೆ ಆಯ್ಕೆಯಾದವರ ಸಿಬ್ಬಂದಿ, ಅಧಿಕಾರಿಗಳ ಪಟ್ಟಿಯಲ್ಲಿ ಮುಖ್ಯಪೇದೆ ಸಲಾಂ ಪಾಷಾ ಹೆಸರು ಪ್ರಕಟವಾಗಿದೆ.

ಮೇಟಗಳ್ಳಿ ಹಾಗೂ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕನ್ನಕಳುವು ಹಾಗೂ ಗಾಂಜಾ ಪ್ರಕರಣಗಳ ಆರೋಪಿಗಳ ಸಂಭಂಧಿಕರ ಜೊತೆ ಸಂಪರ್ಕ ಇಟ್ಟುಕೊಂಡಿದ್ದರ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದೆ.

ಸಮಾಜಘಾತುಕ ಶಕ್ತಿಗಳ ಜೊತೆ ಕೈಜೋಡಿಸಿ ಸಾರ್ವಜನಿಕರ ಸ್ವತ್ತು ಕಳುವಾಗಲು ಕಾರಣರಾಗಿದ್ದಾರೆ, ಮುಂದಿನ ದಿನಗಳಲ್ಲಿ ಇಲಾಖೆಯ ಆಂತರಿಕ ಮತ್ತು ಗುಪ್ತಮಾಹಿತಿಗಳು ಸೋರಿಕೆಯಾಗಿ ಸಾರ್ವಜನಿಕರ ಸ್ವತ್ತುಗಳು ಹೆಚ್ಚಾಗಿ ಕಾಣೆಯಾಗುವ ಸಾಧ್ಯತೆಗಳು ಇರುವ ಕಾರಣ ನೀಡಿ ಸಲೀಂ ಪಾಷಾ ರನ್ನ ಸಸ್ಪೆಂಡ್ ಮಾಡಲಾಗಿದೆ.

ಹೀಗಿದ್ದರೂ ಸಲೀಂ ಪಾಷಾ ಹೆಸರು ಮುಖ್ಯಮಂತ್ರಿಗಳ ಪದಕ ಪಟ್ಟಿಯಲ್ಲಿ ಸೇರ್ಪಡೆಯಾಗಿರುವುದು ಪೊಲೀಸ್ ಇಲಾಖೆಯ ವ್ಯವಸ್ಥೆಯನ್ನೆ ಅನುಮಾನದಿಂದ ನೋಡುವಂತಾಗಿದೆ.

ಮುಖ್ಯಮಂತ್ರಿಗಳ ಪದಕ ಪಡೆಯಬೇಕಿದ್ದಲ್ಲಿ ಸಾಕಷ್ಟು ಹಂತಗಳಿವೆ.ಹಿರಿಯ ಅಧಿಕಾರಿಗಳ ಶಿಫಾರಸ್ಸು ಅಗತ್ಯವಿದೆ.ಹೀಗಿದ್ದರೂ ಪದಕ ಪಡೆಯಲು ಸಲೀಂ ಪಾಷಾ ಅರ್ಹತೆ ಪಡೆದಿದ್ದಾರೆಂದರೆ ಇಡೀ ವ್ಯವಸ್ಥೆಯ ಮೇಲೆ ಅನುಮಾನ ಮೂಡುವುದು‌ ಸಹಜ.

ಅಧಿಕಾರಿಯೊಬ್ಬರ ಅಭಿಪ್ರಾಯದಂತೆ ಇದು 2023 ರ ಕರ್ತವ್ಯದ ಆಧಾರದ ಮೇಲೆ ಕೊಟ್ಟಿದ್ದಾರೆ ಎಂದು ಸಮರ್ಥನೆ ಮಾಡಲಾಗಿದೆ.

ಕಳೆದ ವರ್ಷ ಒಳ್ಳೆಯವನಾದ ವ್ಯಕ್ತಿ ಈ ವರ್ಷ ಕಳ್ಳನಾದರೆ ಆತ ಒಳ್ಳೆಯವ ಎಂದು ನೋಡಲಾಗುತ್ತದೆಯೇ ಎಂಬುದಕ್ಕೆ ಇಲಾಖೆಯವರೇ ಉತ್ತರಿಸಬೇಕಿದೆ.


Share this with Friends

Related Post