Fri. Mar 6th, 2026

ಜಲ ಜೀವನ ಮಿಷನ್ ಕಾಮಗಾರಿ ಚುರುಕುಗೊಳಿಸಲು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೂಚನೆ

Share this with Friends

ಬೆಂಗಳೂರು: ರಾಜ್ಯದ ಗ್ರಾಮೀಣ ಭಾಗದ ಪ್ರತಿಯೊಂದು ಮನೆಗೂ ಕುಡಿಯುವ ನೀರು ತಲುಪಿಸುವ ‘ಜಲ ಜೀವನ ಮಿಷನ್’ (JJM) ಯೋಜನೆಯ ಪ್ರಗತಿ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅಧ್ಯಕ್ಷತೆಯಲ್ಲಿ ಇಂದು ಉನ್ನತ ಮಟ್ಟದ ‘ಅಪೆಕ್ಸ್ ಸಮಿತಿ’ ಸಭೆ ನಡೆಯಿತು.

ಸಭೆಯಲ್ಲಿ ಯೋಜನೆಯ ಅನುಷ್ಠಾನದಲ್ಲಿ ಎದುರಾಗಿರುವ ತಾಂತ್ರಿಕ ಸವಾಲುಗಳು ಹಾಗೂ ಪ್ರಸ್ತುತ ಕಾಮಗಾರಿಗಳ ವೇಗದ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ನಿಗದಿತ ಅವಧಿಯೊಳಗೆ ಮನೆ ಮನೆಗೆ ನಳದ ಸಂಪರ್ಕ ಕಲ್ಪಿಸುವ ಗುರಿಯನ್ನು ತಲುಪಲು ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಮುಖ್ಯ ಕಾರ್ಯದರ್ಶಿಗಳು ನಿರ್ದೇಶನ ನೀಡಿದರು.

ಉನ್ನತ ಅಧಿಕಾರಿಗಳ ಉಪಸ್ಥಿತಿ:

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ (RDWSD) ವತಿಯಿಂದ ಆಯೋಜಿಸಲಾಗಿದ್ದ ಈ ಸಭೆಯಲ್ಲಿ ಅಭಿವೃದ್ಧಿ ಆಯುಕ್ತೆ ಉಮಾ ಮಹದೇವನ್, ಸರ್ಕಾರದ ಕಾರ್ಯದರ್ಶಿ ಸಮೀರ್ ಶುಕ್ಲಾ, ಪಂಚಾಯತ್ ರಾಜ್ ಕಾರ್ಯದರ್ಶಿ ಹಾಗೂ ಆಯುಕ್ತ ರಂದೀಪ್ ಡಿ. ಭಾಗವಹಿಸಿ ಪ್ರಗತಿ ವರದಿ ಮಂಡಿಸಿದರು.

ಇಂಜಿನಿಯರ್-ಇನ್-ಚೀಫ್ ಅಶೋಕ್ ಎಲ್. ವಾಸನದ್, ಅಧೀಕ್ಷಕ ಅಭಿಯಂತರರಾದ ಸುನಂದಾ, ಮತ್ತು ಉಪ ಕಾರ್ಯದರ್ಶಿ (ಆಡಳಿತ) ಜಾಫರ್ ಶರೀಫ್ ಸುತಾರ್ ಸೇರಿದಂತೆ ವಿವಿಧ ವಿಭಾಗಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದು, ಯೋಜನೆಯ ಗುಣಮಟ್ಟ ಮತ್ತು ನಿರ್ವಹಣೆಯ ಕುರಿತು ಮಾಹಿತಿ ಹಂಚಿಕೊಂಡರು.

ಗುಣಮಟ್ಟಕ್ಕೆ ಆದ್ಯತೆ:

ಕೇವಲ ಪೈಪ್‌ಲೈನ್ ಅಳವಡಿಸುವುದಷ್ಟೇ ಅಲ್ಲದೆ, ಸರಬರಾಜು ಮಾಡುವ ನೀರಿನ ಶುದ್ಧತೆ ಮತ್ತು ಮೂಲಗಳ ಸುಸ್ಥಿರತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಜಲ ಶಕ್ತಿ ಸಚಿವಾಲಯದ ಮಾರ್ಗಸೂಚಿಯಂತೆ ಪ್ರತಿ ಹಳ್ಳಿಯಲ್ಲೂ ನೀರು ಮತ್ತು ನೈರ್ಮಲ್ಯ ಸಮಿತಿಗಳನ್ನು ಸಕ್ರಿಯಗೊಳಿಸುವಂತೆ ಸಭೆಯಲ್ಲಿ ಸೂಚಿಸಲಾಯಿತು.


Share this with Friends

Related Post