Fri. Mar 6th, 2026

ಚೊಂಬು’ ಕ್ರೆಡಿಟ್ ರಾಜ್ಯ ಸರ್ಕಾರದ್ದೇ; ಸಿಎಂ ಸಿದ್ದರಾಮಯ್ಯ ಟೀಕೆಗೆ ಹೆಚ್‌ಡಿಕೆ ತೀಕ್ಷ್ಣ ತಿರುಗೇಟು

Share this with Friends

ಮೈಸೂರು: ಕೇಂದ್ರ ಬಜೆಟ್ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ‘ಖಾಲಿ ಚೊಂಬು’ ಟೀಕೆಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮೈಸೂರಿನಲ್ಲಿ ಭಾನುವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ಖಾಲಿ ಚೊಂಬಿನ ಕ್ರೆಡಿಟ್ ರಾಜ್ಯ ಸರ್ಕಾರಕ್ಕೆ ಸಲ್ಲುತ್ತದೆ. ಕೇಂದ್ರ ಕೊಟ್ಟ ಹಣವನ್ನೇ ಸರಿಯಾಗಿ ಬಳಸದ ಇವರು, ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರವನ್ನು ದೂರುತ್ತಿದ್ದಾರೆ,” ಎಂದು ಟಾಂಗ್ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು,”ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿಲ್ಲ. 16ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಬರಬೇಕಿದ್ದ ₹50,000 ಕೋಟಿಯನ್ನು ₹63,000 ಕೋಟಿಗೆ ಏರಿಸಲಾಗಿದೆ. ₹13,000 ಕೋಟಿ ಹೆಚ್ಚುವರಿಯಾಗಿ ನೀಡಿರುವುದು ಸಿಎಂ ಕಣ್ಣಿಗೆ ಖಾಲಿ ಚೊಂಬಿನಂತೆ ಕಾಣುತ್ತಿದೆಯೇ?” ಎಂದು ಅವರು ಪ್ರಶ್ನಿಸಿದರು.

ಕೇಂದ್ರದ 53ಕ್ಕೂ ಹೆಚ್ಚು ಪ್ರಮುಖ ಯೋಜನೆಗಳ ಪ್ರಯೋಜನವನ್ನು ರಾಜ್ಯ ಸರ್ಕಾರ ಸರಿಯಾಗಿ ಪಡೆದುಕೊಳ್ಳುತ್ತಿಲ್ಲ. ಕೇಂದ್ರ ನೀಡಿದ ಅನುದಾನವನ್ನು ಬಳಸಿಕೊಳ್ಳುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅವರು ಆರೋಪಿಸಿದರು.

“ಇಡೀ ಜಗತ್ತೇ ಭಾರತದ ಆರ್ಥಿಕ ಪ್ರಗತಿಯನ್ನು ನೋಡುತ್ತಿದೆ. ಯುರೋಪಿಯನ್ ಒಕ್ಕೂಟ ಮತ್ತು ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದಗಳಾಗಿವೆ. ವಾಣಿಜ್ಯ ಚಟುವಟಿಕೆಗಳು ಮತ್ತು ರಫ್ತು ಹೆಚ್ಚಳದಿಂದ ದೇಶದ ರೈತರಿಗೆ ಅನುಕೂಲವಾಗುತ್ತಿದೆ. ಇಷ್ಟೆಲ್ಲಾ ಸಾಧನೆಗಳು 17 ಬಜೆಟ್ ಮಂಡಿಸಿದ ಅನುಭವವಿರುವ ಮುಖ್ಯಮಂತ್ರಿಗಳಿಗೆ ಅರ್ಥವಾಗುತ್ತಿಲ್ಲವೇ?” ಎಂದು ಲೇವಡಿ ಮಾಡಿದರು.

‘ನೋಡೋಣ ಇವರ ಬಜೆಟ್ ಹೇಗಿರುತ್ತೆ’:

ತಮ್ಮ 17ನೇ ಬಜೆಟ್ ಮಂಡಿಸಲು ಸಿದ್ಧತೆ ನಡೆಸುತ್ತಿರುವ ಸಿದ್ದರಾಮಯ್ಯ ಅವರ ‘ಹಮ್ಮು-ಬಿಮ್ಮು’ ಏನೆಂಬುದು ನಮಗೆ ಗೊತ್ತು. “ಖಾಲಿ ಚೊಂಬು ಹಿಡಿದಿರುವುದು ಇವರೇ ಹೊರತು ಕೇಂದ್ರವಲ್ಲ. ಇವರು ಮಂಡಿಸುವ ಬಜೆಟ್ ರಾಜ್ಯಕ್ಕೆ ಯಾವ ಭಾಗ್ಯ ತರಲಿದೆ ಎಂದು ನಾವು ಕಾದು ನೋಡುತ್ತೇವೆ,” ಎಂದು ಸಚಿವರು ಸವಾಲು ಹಾಕಿದರು

500 ಕೋಟಿ ವೆಚ್ಚದ ‘ARAI’ ಸಂಶೋಧನಾ ಕೇಂದ್ರ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಾರು 500 ಕೋಟಿ ರೂಪಾಯಿ ವೆಚ್ಚದಲ್ಲಿ ‘ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ’ (ARAI) ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗುವುದು.”ಈ ಸಂಶೋಧನಾ ಕೇಂದ್ರದ ಸ್ಥಾಪನೆಗೆ ಕನಿಷ್ಠ 100 ಎಕರೆ ಭೂಮಿಯ ಅಗತ್ಯವಿದೆ. ಮಂಡ್ಯ ಜಿಲ್ಲೆಯಲ್ಲೇ ಸೂಕ್ತ ಜಾಗ ಗುರುತಿಸಿ ಹಂಚಿಕೆ ಮಾಡುವಂತೆ ಕೋರಿ ನಾನು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ. ರಾಜ್ಯ ಸರ್ಕಾರ ಭೂಮಿ ನೀಡಿದ ತಕ್ಷಣ ಕಾಮಗಾರಿ ಆರಂಭವಾಗಲಿದ್ದು, ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸವಿದೆ,” ಎಂದು ಅವರು ತಿಳಿಸಿದರು.

ರಾಜ್ಯದ ಆಟೋಮೊಬೈಲ್ ಕ್ಷೇತ್ರಕ್ಕೆ ಬೂಸ್ಟರ್ ಡೋಸ್:

ಈ ಕೇಂದ್ರವು ಕೇವಲ ಮಂಡ್ಯ ಅಥವಾ ಮೈಸೂರು ಭಾಗಕ್ಕೆ ಸೀಮಿತವಾಗದೆ, ಇಡೀ ಕರ್ನಾಟಕದ ಆಟೋಮೊಬೈಲ್ ವಲಯಕ್ಕೆ ಹೊಸ ಚೈತನ್ಯ ನೀಡಲಿದೆ. “ಕೇಂದ್ರ ಬಜೆಟ್‌ನಲ್ಲಿ ಈಗಾಗಲೇ ಈ ಯೋಜನೆಗೆ ಹಣ ಮಂಜೂರಾಗಿದೆ. ಮೊದಲ ಹಂತದಲ್ಲಿ 500 ಕೋಟಿ ರೂ. ಹೂಡಿಕೆಯಾಗಲಿದ್ದು, ಮುಂದಿನ ದಿನಗಳಲ್ಲಿ ಹೂಡಿಕೆ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ,” ಎಂದು ಸಚಿವರು ವಿವರಿಸಿದರು.

ವಿರೋಧ ಪಕ್ಷಗಳ ಟೀಕೆಗೆ ತಿರುಗೇಟು:

ಕುಮಾರಸ್ವಾಮಿ ಅವರು ಮಂಡ್ಯದಿಂದ ಗೆದ್ದು ಏನು ತಂದರು ಎಂದು ಪ್ರಶ್ನಿಸುತ್ತಿದ್ದ ಸ್ಥಳೀಯ ಶಾಸಕರಿಗೆ ಈ ಮೂಲಕ ಉತ್ತರಿಸಿದ ಅವರು, “ನಾನು ನಾಟಕವಾಡಲು ಪತ್ರ ಬರೆದಿಲ್ಲ. ಪ್ರಧಾನಿಯವರು ನನಗೆ ಜವಾಬ್ದಾರಿಯುತ ಸ್ಥಾನ ನೀಡಿದ್ದಾರೆ. ರಾಜ್ಯದ ಕೈಗಾರಿಕಾ ಪ್ರಗತಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ. ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಯಾವುದೇ ಅನ್ಯಾಯವಾಗಿಲ್ಲ,” ಎಂದು ಸ್ಪಷ್ಟಪಡಿಸಿದರು.

ಈ ಕೇಂದ್ರದ ಸ್ಥಾಪನೆಯಿಂದ ಮಂಡ್ಯ ಭಾಗದಲ್ಲಿ ಸಾವಿರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ತಾಂತ್ರಿಕವಾಗಿ ಜಿಲ್ಲೆ ಹೊಸ ಎತ್ತರಕ್ಕೆ ಏರಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು

ವಿಐಎಸ್‌ಎಲ್‌ನಲ್ಲಿ ‘ಸ್ಪೆಷಾಲಿಟಿ ಸ್ಟೀಲ್’ ಉತ್ಪಾದನೆ:

“ನಶಿಸಿ ಹೋಗುತ್ತಿರುವ ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಯನ್ನು ಉಳಿಸಲು ಕೇಂದ್ರವು ₹4,000 ರಿಂದ ₹5,000 ಕೋಟಿ ಹೂಡಿಕೆ ಮಾಡುತ್ತಿದೆ. ಸೇನೆ ಹಾಗೂ ವೈಮಾನಿಕ ಕ್ಷೇತ್ರಕ್ಕೆ ಅತಿ ಅಗತ್ಯವಾಗಿ ಬೇಕಿರುವ ‘ಸ್ಪೆಷಾಲಿಟಿ ಸ್ಟೀಲ್’ ಉತ್ಪಾದನಾ ಘಟಕವಾಗಿ ಇದನ್ನು ಪರಿವರ್ತಿಸಲು ನಾವು ಯೋಜನೆ ರೂಪಿಸಿದ್ದೇವೆ,” ಎಂದು ಮಾಹಿತಿ ನೀಡಿದರು.

ಹೆಚ್‌ಎಂಟಿ ಹಾಗೂ ಅರಣ್ಯ ಇಲಾಖೆ ತಕರಾರು:

ಹೆಚ್‌ಎಂಟಿ ಕಾರ್ಖಾನೆಯ ಪುನಶ್ಚೇತನಕ್ಕೆ ತಾವು ಪ್ರಯತ್ನಿಸುತ್ತಿದ್ದರೂ, ರಾಜ್ಯ ಅರಣ್ಯ ಇಲಾಖೆಯು ಆ ಜಾಗ ತಮ್ಮದು ಎಂದು ತಕರಾರು ತೆಗೆಯುವ ಮೂಲಕ ಯೋಜನೆಗೆ ಕೊಕ್ಕೆ ಹಾಕುತ್ತಿದೆ. ಕೇಂದ್ರದ ಯೋಜನೆಗಳಿಗೆ ರಾಜ್ಯ ಸರ್ಕಾರವೇ ಅಡ್ಡಿಪಡಿಸುತ್ತಿರುವುದಕ್ಕೆ ಅವರು ಬೇಸರ ವ್ಯಕ್ತಪಡಿಸಿದರು.

ರಾಜ್ಯ ಸಚಿವರಿಗೆ ‘ಸೌಜನ್ಯ’ದ ಪಾಠ:

“ನಾನು ಕೇಂದ್ರ ಸಚಿವನಾಗಿ ಅಧಿಕಾರ ವಹಿಸಿಕೊಂಡು ಒಂದೂವರೆ ವರ್ಷ ಕಳೆದಿದೆ. ಈವರೆಗೆ ರಾಜ್ಯದ ಒಬ್ಬನೇ ಒಬ್ಬ ಸಚಿವ ನನ್ನನ್ನು ಭೇಟಿ ಮಾಡಿ ಅಭಿವೃದ್ಧಿ ಬಗ್ಗೆ ಚರ್ಚಿಸಿಲ್ಲ. ಮೊದಲು ಕೇಂದ್ರದೊಂದಿಗೆ ಉತ್ತಮ ಸಂಬಂಧ ಬೆಳೆಸಿ ಯೋಜನೆಗಳನ್ನು ಪಡೆಯುವುದನ್ನು ಕಲಿಯಿರಿ. ನಿಮ್ಮ ನಡವಳಿಕೆಯನ್ನು ಬದಲಿಸಿಕೊಳ್ಳಿ,” ಎಂದು ರಾಜ್ಯ ಸಚಿವರಿಗೆ ಖಾರವಾಗಿ ಪ್ರತಿಕ್ರಿಯಿಸಿದರು.

ಸಂಡೂರು ಗಣಿಗಾರಿಕೆ ವಿವಾದ:

ಬಳ್ಳಾರಿಯ ಸಂಡೂರಿನಲ್ಲಿ ಕುದುರೆಮುಖ ಕಬ್ಬಿಣ ಮತ್ತು ಅದಿರು ಸಂಸ್ಥೆಗೆ (KIOCL) ರಾಜ್ಯ ಸರ್ಕಾರವೇ ಗಣಿ ಹಂಚಿಕೆ ಮಾಡಿ, ಈಗ ತಾನೇ ಅಡ್ಡಿಪಡಿಸುತ್ತಿದೆ. “ಪ್ರತಿ ವಿಚಾರಕ್ಕೂ ಕೇಂದ್ರದತ್ತ ಬೆರಳು ಮಾಡುವುದಾದರೆ ರಾಜ್ಯ ಸರ್ಕಾರ ಏಕಿರಬೇಕು?” ಎಂದು ಅವರು ಪ್ರಶ್ನಿಸಿದರು


Share this with Friends

Related Post