ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತರಲು ಹೊರಟಿರುವ ದ್ವೇಷ ಭಾಷಣ ಕಾನೂನಿಗೆ ಸಿಟಿಜನ್ಸ್ ಫಾರ್ ಡೆಮಾಕ್ರಸಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಯಾವುದೇ ಕಾರಣಕ್ಕೂ ದ್ವೇಷ ಭಾಷಣ ಮಸೂದೆಗೆ ರಾಜ್ಯಪಾಲರು ಸಹಿ ಹಾಕಬಾರದು ಎಂದು ಮನವಿ ಮಾಡಿದೆ.
ಸಿಟಿಜನ್ಸ್ ಫಾರ್ ಡೆಮಾಕ್ರಸಿ ನಿಯೋಗ ಇಂದು ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಿತು.ದ್ವೇಷ ಭಾಷಣ ಮಸೂದೆಯಿಂದ ತೀವ್ರ ದುಷ್ಪರಿಣಾಮ ಉಂಟಾಗುವ ಕುರಿತು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿತು. ಈ ಮಸೂದೆಗೆ ಒಪ್ಪಿಗೆ ನೀಡದಂತೆ ಮನವಿ ಸಲ್ಲಿಸಿತು.
ರಾಜ್ಯಪಾಲರಿಗೆ ಸಿಟಿಜನ್ಸ್ ಫಾರ್ ಡೆಮಾಕ್ರಸಿ ವತಿಯಿಂದ ಮನವಿ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಹಿರಿಯ ವಕೀಲ ಎಂ.ಸಿ.ನಾಣಯ್ಯ,ದ್ವೇಷ ಭಾಷಣ ಸಂಬಂಧಿತ ಮಸೂದೆಯನ್ನು ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರು ಲೋಕಸಭೆಯಲ್ಲಿ ಮಂಡಿಸಿದ್ದರು. ರಾಜ್ಯಸಭೆಯಲ್ಲಿ ಚರ್ಚಿಸಿದ ಬಳಿಕ ಅದು ಲೋಕಸಭೆಗೆ ಬಂದಿತ್ತು. ಜನರು ಇದನ್ನು ತೀವ್ರವಾಗಿ ಖಂಡಿಸಿದ್ದರು. ಆದ್ದರಿಂದ ಅದನ್ನು ಜಾರಿ ಮಾಡಿರಲಿಲ್ಲ.ಈಗ ರಾಜ್ಯದಲ್ಲಿ ಈ ಮಸೂದೆ ಕಾನೂನಾದರೆ ಬಹಳಷ್ಟು ಜನರಿಗೆ ತೊಂದರೆ ಆಗಲಿದೆ. ಸಾಂಸಾರಿಕ ಸಮಸ್ಯೆ, ನೆರೆಕರೆಯವರ ನಡುವಿನ ಗೊಂದಲದ ವಿಷಯದಲ್ಲೂ ತೊಂದರೆ ಸಂಭವಿಸಬಹುದು. ಕಾನೂನಿನಲ್ಲಿ ಇದು ಈಗಾಗಲೇ ಇದೆ ಎಂದು ಗಮನ ಸೆಳೆದರು.
ಕೆಟ್ಟ ಭಾಷೆ ಬಳಸಿದ ತಪ್ಪಿತಸ್ಥರಿಗೆ ಕನಿಷ್ಠ 3 ವರ್ಷ ಶಿಕ್ಷೆ, 50 ಸಾವಿರ ದಂಡ ವಿಧಿಸಲು ಸೂಚನೆ ಇದೆ. ಅದು ಜಾಸ್ತಿಯಾದರೆ 7 ವರ್ಷ ಶಿಕ್ಷೆ ಕೊಡುವ ಅವಕಾಶ ಇದೆ. ಇದು ಪುನರಾವರ್ತನೆ ಆದರೆ, 10 ವರ್ಷ ಶಿಕ್ಷೆ, 1 ಲಕ್ಷ ದಂಡ ವಿಧಿಸಲು ಅವಕಾಶ ಇದೆ. ದ್ವೇಷ ಭಾಷಣ ಮಸೂದೆಯಿಂದ ತೀವ್ರ ದುಷ್ಪರಿಣಾಮ ಆಗಲಿದೆ ಎಂದು ತಿಳಿಸಿದರು.
ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಮಾತನಾಡಿ, ದ್ವೇಷ ಭಾಷಣ ಸಂಬಂಧಿತ ಮಸೂದೆ ವಿರುದ್ಧ ರಾಜ್ಯಪಾಲರ ಬಳಿ ತಿಳಿಸಿ ಮನವಿ ಸಲ್ಲಿಸಿದ್ದೇವೆ. ಕೇಂದ್ರ ಸರಕಾರ ಈಚೆಗೆ ಜಾರಿಗೊಳಿಸಿದ ಬಿಎನ್‍ಎಸ್ ಅಧಿನಿಯಮದ ಅನೇಕ ಸೆಕ್ಷನ್‍ಗಳು ದ್ವೇಷ ಭಾಷಣದ ಕುರಿತು ಉಲ್ಲೇಖಿಸುತ್ತವೆ. ಕೇಂದ್ರ ಕಾನೂನಿನಲ್ಲಿ ಇದೆಲ್ಲ ಇದ್ದಾಗ ರಾಜ್ಯದಲ್ಲಿ ಪ್ರತ್ಯೇಕ ಕಾನೂನು ಬೇಕೇ ಎಂದು ಪ್ರಶ್ನಿಸಿದರು. ರಾಜ್ಯ ಕಾನೂನು ಅಸ್ತಿತ್ವಕ್ಕೆ ಬರಲು ಸಾಧ್ಯವೇ ಎಂದು ಕೇಳಿದರು.
ಇಂಥ ಸಂದರ್ಭದಲ್ಲಿ ಸಂವಿಧಾನ ಏನು ಹೇಳುತ್ತದೆ ಎಂಬ ಬಗ್ಗೆ ರಾಜ್ಯಪಾಲರ ಜೊತೆ ಚರ್ಚಿಸಿದ್ದೇವೆ. ಕೇಂದ್ರದ ಕಾನೂನು ಇದ್ದಾಗ ಅದೇ ವಿಷಯದಲ್ಲಿ ರಾಜ್ಯವೂ ಪ್ರತ್ಯೇಕ ಕಾಯಿದೆ ತರಲು ಹೊರಟಲ್ಲಿ ಅದನ್ನು ಗೌರವಾನ್ವಿತ ರಾಷ್ಟ್ರಪತಿಗಳಿಗೆ ಕಳಿಸಬೇಕಾಗುತ್ತದೆ ಎಂದು ಗಮನ ಸೆಳೆದುದಾಗಿ ಹೇಳಿದರು.
ಹರಿರಾಮ್ ಅವರು ಮಾತನಾಡಿ, ದ್ವೇಷ ಭಾಷಣ ಸಂಬಂಧಿತ ಮಸೂದೆಯನ್ನು ಸರಕಾರ ಮಂಜೂರು ಮಾಡಿದೆ. ಇದು ದ್ವೇಷ ಭಾಷಣ ಮಸೂದೆ ಅಲ್ಲ; ಇದು ಮಾತನ್ನೇ ನಿಲ್ಲಿಸುವ ಕ್ರಮ ಎಂದು ಆಕ್ಷೇಪಿಸಿದರು. ಇದರಿಂದ ಪ್ರತಿ ಮನೆಯಲ್ಲೂ ಒಬ್ಬೊಬ್ಬ ಕಾನೂನು ಸಲಹೆಗಾರರನ್ನು ಇಟ್ಟುಕೊಳ್ಳುವ ಪರಿಸ್ಥಿತಿ ಬರಲಿದೆ ಎಂದು ತಿಳಿಸಿದರು.
ಲಕ್ಷ್ಮಿ ಅಯ್ಯಂಗಾರ್ ಮಾತನಾಡಿ, ದ್ವೇಷ ಭಾಷಣ ಸಂಬಂಧಿತ ಮಸೂದೆಯನ್ನು ತರಾತುರಿಯಲ್ಲಿ ತರಲು ಹೊರಟಿದ್ದಾರೆ. ಯಾವುದೇ ಚರ್ಚೆ ನಡೆದಿಲ್ಲ ಎಂದು ತಿಳಿಸಿದರು. ಸಮಾಜದ ಮೇಲೆ ಆಗಬಹುದಾಗ ಪರಿಣಾಮದ ಕುರಿತು ಚರ್ಚೆ ಮಾಡಿಲ್ಲ ಎಂದು ವಿವರಿಸಿದರು. ಬಿಎನ್‍ಎಸ್ ಅಡಿಯಲ್ಲಿ ಇರುವ ಅಂಶಗಳನ್ನೇ ಇಲ್ಲಿಯೂ ಪ್ರಸ್ತಾಪಿಸಲಾಗಿದೆ. ಕೇಂದ್ರದ ಕಾಯ್ದೆ ಇರುವಾಗ ರಾಜ್ಯದಲ್ಲಿ ಪ್ರತ್ಯೇಕ ಮಸೂದೆ ಅಗತ್ಯ ಇರಲಿಲ್ಲ ಎಂದು ತಿಳಿಸಿದರು.

