ಮೈಸೂರು, ಮೇ.13: ಒಕ್ಕಲಿಗ ವುಮೆನ್ಸ್ ವೆಲ್ಫೇರ್ ವತಿಯಿಂದ ಕಾರ್ಮಿಕರ ದಿನಾಚರಣೆ ಹಮ್ಮಿಕೊಳ್ಳಲಾಯಿತು.
ಮೈಸೂರಿನ ವಿಜಯನಗರದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಸ್ವಚ್ಛತಾ ಸೇನಾನಿ, ಪೌರಕಾರ್ಮಿಕರಿಗೆ ಸನ್ಮಾನಿಸುವ ಮೂಲಕ ಕಾರ್ಮಿಕರ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಒಕ್ಕಲಿಗ ವುಮೆನ್ಸ್ ವೆಲ್ಫೇರ್ ಅಧ್ಯಕ್ಷೆ ಪದ್ಮಜಾ ಶ್ರೀನಿವಾಸ್, ಮೈಸೂರು ಇಷ್ಟೊಂದು ಸ್ವಚ್ಛವಾಗಿರಲು ಪೌರಕಾರ್ಮಿಕರು ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗಾಳಿ, ಮಳೆ, ಬಿಸಿಲು, ಚಳಿ ಎನ್ನದೆ, ದಿನನಿತ್ಯ ನಸುಕಿನ ಜಾವದಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಪೌರ ಕಾರ್ಮಿಕರು ನೈಜ ಕಾಯಕಯೋಗಿಗಳು, ಸ್ವಚ್ಛತಾ ರೂವಾರಿಗಳು ಎಂದು ಶ್ಲಾಘಿಸಿದರು.
ಎಂತಹ ಸಂದಿಗ್ಧ ಸ್ಥಿತಿಯಲ್ಲೂ ತಮ್ಮ ಜೀವದ ಹಂಗನ್ನು ತೊರೆದು ಬಿಡುವಿಲ್ಲದ ನೈರ್ಮಲೀಕರಣ ಕಾರ್ಯ ಮಾಡುವ ಇವರೇ ನಿಜವಾದ ಕಾಯಕ ಯೋಗಿಗಳು ಎಂದು ಹೇಳಿದರು.
ನಗರ ಪಾಲಿಕೆ ಮಾಜಿ ಸದಸ್ಯೆ ಭಾಗ್ಯ ಮಾದೇಶ್,ಸಂಘದ ಉಪಾಧ್ಯಕ್ಷೆ ನಳಿನಾ ಮಂಜು , ಗೌರವ ಅಧ್ಯಕ್ಷೆ ಜಯಲಕ್ಷ್ಮಿ, ಕಾರ್ಯದರ್ಶಿ ಶೋಭಾ ಮಂಜುನಾಥ್, ವನಿತಾ ರವಿ, ಖಜಾಂಜಿ ಭವ್ಯ ರಘು, ವಿಜಯ ಮಂಜು, ನಿರ್ದೇಶಕರುಗಳಾದ ನವೀನ ರಂಗರಾಜ್, ಸುನಿತಾ, ಯಶೋಧ ಗೋಪಾಲಸ್ವಾಮಿ ಮತ್ತು ಸಂಘದ ಸದಸ್ಯರು, ಪದಾಧಿಕಾರಿಗಳು ಭಾಗವಹಿಸಿದ್ದರು.