Mon. Dec 23rd, 2024

ವಿಚಾರಣೆ ನಡೆಸುವ ಮೊದಲೇ ತಪ್ಪಿತಸ್ಥರಿಗೆ ಕ್ಲೀನ್‌ ಚಿಟ್‌ :‌ ಅಶೋಕ್ ಟೀಕೆ

Share this with Friends

ಬೆಂಗಳೂರು: ನಾಗಮಂಗಲದಲ್ಲಿ ವಿಚಾರಣೆ ನಡೆಸುವ ಮೊದಲೇ ಕಾಂಗ್ರೆಸ್‌ ಸರ್ಕಾರ ತಪ್ಪಿತಸ್ಥರಿಗೆ ಕ್ಲೀನ್‌ ಚಿಟ್‌ ನೀಡಲು ಹೊರಟಿದೆ‌ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೊದಲು ತನಿಖೆ ನಡೆಸಿ, ನಂತರ ತಪ್ಪಿತಸ್ಥರು ಯಾರೆಂದು ತೀರ್ಮಾನಿಸಲಿ ಎಂದು ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ವಿಧಾನಸೌಧದಲ್ಲಿ ಪಾಕ್‌ ಜಿಂದಾಬಾದ್‌ ಕೂಗಿದಾಗ ಹಾಗೆ ಆಗಿಯೇ ಇಲ್ಲ ಎಂದಿದ್ದರು, ಬಾಂಬ್‌ ಸ್ಫೋಟವಾದಾಗಲೂ ಅದು ವ್ಯಾಪಾರದ ಜಗಳ ಎಂದು ಹೇಳಿದ್ದರು. ಕುಕ್ಕರ್‌ ಬಾಂಬ್‌ ಸ್ಫೋಟದ ಬಗ್ಗೆಯೂ ಹೀಗೆಯೇ ಹೇಳಿದ್ದರು. ನಾಗಮಂಗಲದಲ್ಲಿ ಪಾಕಿಸ್ತಾನಕ್ಕೆ ಜೈಕಾರ ಹಾಕಿರುವುದರ ಬಗ್ಗೆ ಮೊದಲು ಪರಿಶೀಲಿಸಲಿ ಎಂದು ಒತ್ತಾಯಿಸಿದರು.

ಆದರೆ ಸಚಿವ ಪ್ರಿಯಾಂಕ್‌ ಖರ್ಗೆಯಂತವರು ಅದನ್ನು ಸಮರ್ಥಿಸಿಕೊಳ್ಳುತ್ತಾರೆ ಎಂದು ಕಿಡಿಕಾರಿದರು.

ವಿದೇಶಕ್ಕೆ ಹೋದ ರಾಹುಲ್‌ ಗಾಂಧಿ, ಭಾರತದ ವಿರುದ್ಧ ಮಾತಾಡುವುದರ ಜೊತೆಗೆ ಮೀಸಲಾತಿ ತೆಗೆದುಹಾಕುವ ಬಗ್ಗೆ ಹೇಳಿದ್ದಾರೆ. ಕಾಂಗ್ರೆಸ್‌ ಆಡಳಿತ ಇರುವ ಕಡೆಗಳಲ್ಲಿ ಮುಸ್ಲಿಂ ಮೂಲಭೂತವಾದಿಗಳಿಗೆ ಹಬ್ಬದ ವಾತಾವರಣ ಇರುತ್ತದೆ. ಸವಾಲು ಹಾಕುವವರನ್ನು ಜೈಲಿಗೆ ಹಾಕುವ ಬದಲು ಪೊಲೀಸರು ಅವರನ್ನು ಕರೆದು ಕಾಫಿ ಕೊಟ್ಟಿದ್ದಾರೆ,ಹಾಗಾಗಿಯೇ ಕೋಮು ದಳ್ಳುರಿ ಉಂಟಾಗಿದೆ ಎಂದು ಆರೋಪಿಸಿದರು.

ಒಕ್ಕಲಿಗ ಸಮುದಾಯದ ಸರ್ವೋಚ್ಛ ನಾಯಕ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಗೌರವ ಹಾಳು ಮಾಡಲು ಕಾಂಗ್ರೆಸ್‌ ನಾಯಕರು ಯತ್ನಿಸಿದ್ದಾರೆ. ಒಕ್ಕಲಿಗರ ಮೇಲೆ ಅಷ್ಟು ಒಲವಿದ್ದರೆ ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ತೆಗೆದು ಒಕ್ಕಲಿಗರನ್ನೇ ಮುಖ್ಯಮಂತ್ರಿ ಮಾಡಲಿ. ಆಗಲೇ ಡಿ.ಕೆ.ಶಿವಕುಮಾರ್‌ ಪೇಪರ್‌, ಪೆನ್ನು ಹಿಡಿದುಕೊಂಡು ಅಮೆರಿಕಕ್ಕೆ ಹೋಗಿದ್ದಾರೆ ಎಂದು ಟೀಕಿಸಿದರು.

ಜನಪ್ರಿಯ ನಾಯಕ, ವಿಶ್ವನಾಯಕ ನರೇಂದ್ರ ಮೋದಿಯವರ ಜನ್ಮದಿನ ಪ್ರಯುಕ್ತ ಬಿಜೆಪಿ ಕಾರ್ಯಕರ್ತರು ಸೇವೆ ಮಾಡುತ್ತಿದ್ದಾರೆ. 25,000 ಕಾರ್ಯಕರ್ತರು 58,000 ಬೂತ್‌ಗಳಲ್ಲಿ ರಕ್ತದಾನ ಮಾಡುತ್ತಿದ್ದಾರೆ. ಈ ಮೂಲಕ ಪ್ರಧಾನಿಯವರ ಜನ್ಮದಿನಕ್ಕೆ ಶುಭ ಕೋರಲಾಗುತ್ತಿದೆ ಎಂದು ಅಶೋಕ್ ಇದೇ ವೇಳೆ ತಿಳಿಸಿದರು.


Share this with Friends

Related Post