ಬೆಂಗಳೂರು, ಆ.2: ದೇಶದ ಪ್ರತಿಷ್ಠಿತ ಹಾಗೂ ಅತಿದೊಡ್ಡ ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.
ಈ ವೇಳೆ ಮಾತನಾಡಿಸ ಸಿಎಂ,ದೇಶ, ವಿದೇಶಗಳ ಖ್ಯಾತ ವಿಜ್ಞಾನಿಗಳು, ತಂತ್ರಜ್ಞಾನಿಗಳು, ತಾಂತ್ರಿಕ ಚಿಂತಕರು, ಉದ್ಯಮಗಳ ಖ್ಯಾತನಾಮರೊಂದಿಗೆ ಪ್ರತಿಷ್ಠಿತ ನ್ಯಾನೋ ಟೆಕ್ನಾಲಜಿ ಸಮಾವೇಶದಲ್ಲಿ ಭಾಗವಹಿಸಲು ನನಗೆ ಹೆಮ್ಮೆ ಎನಿಸುತ್ತಿದೆ ಎಂದು ಹೇಳಿದರು.
ಪ್ರತಿಷ್ಠಿತ ಪ್ರೊ.ಸಿ.ಎನ್.ಆರ್. ರಾವ್ ಬೆಂಗಳೂರು ಇಂಡಿಯಾ ನ್ಯಾನೋ ಸೈನ್ಸ್ ಪ್ರಶಸ್ತಿಗೆ ಭಾಜನರಾಗಿರುವ ಪ್ರೊ.ಅರಿಂದಮ್ ಘೋಷ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಕರ್ನಾಟಕ ತನ್ನ ಶ್ರೀಮಂತ ಸಾಂಸ್ಕೃತಿಕ ಪರಂಪರೆಗಳಿಗೆ ಮಾತ್ರವಲ್ಲದೆ ಶೈಕ್ಷಣಿಕ ಮತ್ತು ಸಂಶೋಧನೆ ಚಟುವಟಿಕೆಗಳಿಗೆ ಭದ್ರ ತಳಹದಿಯನ್ನು ಕಲ್ಪಿಸುವ ಕಾರ್ಯದಲ್ಲಿ ಹೆಸರುವಾಸಿಯಾಗಿದೆ. ತಾಂತ್ರಿಕತೆ ಆಧಾರಿತ ಅನ್ವೇಷಣೆ ಕ್ಷೇತ್ರದಲ್ಲಿ ನಮ್ಮ ರಾಜ್ಯ ಎಂದಿಗೂ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ಐಐಎಸ್ಸಿ, ಜೆಎನ್‌ಸಿಎಎಸ್‌ಆರ್, ಎನ್‌ಸಿಬಿಎಸ್, ಸಿಇಎನ್‌ಎಸ್ ನಂತಹ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳ ನೆರವಿನೊಂದಿಗೆ, ಬೆಂಗಳೂರು ದೇಶದ ನ್ಯಾನೋ ಟೆಕ್ ಹಬ್ ಆಗಿ ರೂಪುಗೊಳ್ಳುವ ಪೂರ್ಣ ವಿಶ್ವಾಸವಿದೆ, ಮುಂದಿನ ದಿನಗಳಲ್ಲಿ ಬೆಂಗಳೂರು ಈ ಆಧುನಿಕ ತಾಂತ್ರಿಕ ಕ್ಷೇತ್ರದಲ್ಲಿ ಪ್ರಮುಖ ಪಾತ್ರವನ್ನು ನಿಭಾಯಿಸಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಹೆಚ್ಚುತ್ತಿರುವ ನಗರೀಕರಣ, ಜನಸಂಖ್ಯೆ ಹೆಚ್ಚಳ ಹಾಗೂ ಬದಲಾಗುತ್ತಿರುವ ಜೀವನ ಶೈಲಿಯಿಂದ ಮುಂದಿನ ದಿನಗಳಲ್ಲಿ ಈ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಗಳಿದ್ದು ಇವುಗಳಿಗೆ ನ್ಯಾನೋ ಟೆಕ್ನಾಲಜಿ ಆಧಾರಿತ ಪರಿಹಾರಗಳನ್ನು ಸಂಶೋಧಿಸಬೇಕೆಂದು ವಿಜ್ಞಾನಿಗಳಿಗೆ ಮತ್ತು ಇಂಜಿನಿಯರ್‌ಗಳಲ್ಲಿ ಸಿಎಂ ಮನವಿ ಮಾಡಿದರು.
ಕರ್ನಾಟಕದಲ್ಲಿ ಈ ವಿನೂತನ ಉದ್ಯಮ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಲು ಸಾಧ್ಯವಿರುವ ಎಲ್ಲಾ ಸಹಕಾರವನ್ನು ನಮ್ಮ ಸರ್ಕಾರ ನೀಡಲಿದೆ ಎಂದು ಸಿದ್ದು ಭರವಸೆ ನೀಡಿದರು.
ಈ ಸಮಾವೇಶವನ್ನು 2007ರಿಂದ ನಿರಂತರವಾಗಿ ಆಯೋಜಿಸಿಕೊಂಡು ಬರಲು ಮಾರ್ಗದರ್ಶನ ನೀಡುತ್ತಿರುವ ಭಾರತ ರತ್ನ ಪ್ರೊ.ಸಿ.ಎನ್.ಆರ್. ರಾವ್ ಅವರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.