Fri. Mar 6th, 2026

ಕರ್ನಾಟಕಕ್ಕೆ ಶೇ 4.71ರಷ್ಟು ಪಾಲನ್ನು ಕೊಡಿ: ಕೇಂದ್ರಕ್ಕೆ ಸಿಎಂ ಮನವಿ

Share this with Friends

ಬೆಂಗಳೂರು:ರಾಜ್ಯದ ಒಟ್ಟಾರೆ ಆಯವ್ಯಯದಲ್ಲಿ ಇಡೀ ದೇಶದಲ್ಲಿಯೇ ಕೇಂದ್ರದಿಂದ ಅತ್ಯಂತ ಕಡಿಮೆ ತೆರಿಗೆ ಪಾಲು ಮತ್ತು ಅನುದಾನ ಪಡೆಯುವ ರಾಜ್ಯವೂ ಕರ್ನಾಟಕವೇ ಆಗಿರುವುದು ದುರದೃಷ್ಟಕರವಾಗಿದೆ.ನಮಗೆ 14ನೇ ಹಣಕಾಸು ಆಯೋಗವು ನೀಡಿದ್ದ ಶೇ 4.71ರಷ್ಟು ಪಾಲನ್ನು ಕೊಟ್ಟರೆ ಮಾತ್ರ ನಾವು ನಿಟ್ಟುಸಿರು ಬಿಡುವಂತಾಗುತ್ತದೆ. ಅದಕ್ಕಿಂತ ಹೆಚ್ಚು ಕೊಟ್ಟರೆ ಮಾತ್ರ ನೈಜವಾಗಿ ನ್ಯಾಯ ಸಿಕ್ಕಂತಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಅನುದಾನ ಕೊರತೆ ಕುರಿತು ಮಾತನಾಡಿದ‌ ಸಾಮಾಜಿಕ ಜಾಲತಾಣದ ಮೂಲಕ ಅಸಮಧಾನ ಹೊರಹಾಕಿದ ಸಿಎಂ,ಕರ್ನಾಟಕದ ಆರ್ಥಿಕ ಸ್ಥಿತಿಯನ್ನು ನೋಡಿದರೆ, 14ನೇ ಹಣಕಾಸು ಆಯೋಗಕ್ಕೆ ಹೋಲಿಸಿದರೆ 15ನೇ ಹಣಕಾಸು ಆಯೋಗದ ವರದಿಯಿಂದಾಗಿ ಶೇ 23ರಷ್ಟು ತೆರಿಗೆ ಪಾಲು ನೇರವಾಗಿ ಕಡಿಮೆಯಾಯಿತು. ಕೆಲವು ಆರ್ಥಿಕ ಅಜ್ಞಾನಿಗಳು ಈ ಸಂಗತಿಯನ್ನು ಅರ್ಥ ಮಾಡಿಕೊಳ್ಳದೆ ವಿತಂಡವಾದ ಮಾಡುತ್ತಾರೆ ಎಂದು ಬೇಸರಿಸಿದರು.

14ನೇ ಹಣಕಾಸು ಆಯೋಗವು ಶೇ 4.71ರಷ್ಟು ಪಾಲನ್ನು ನಮಗೆ ಒದಗಿಸಿತ್ತು. 15ನೇ ಹಣಕಾಸು ಆಯೋಗವು ಇದನ್ನು ಶೇ 3.64ಕ್ಕೆ ಇಳಿಸುವ ಮೂಲಕ ಘೋರ ಅನ್ಯಾಯ ಮಾಡಿತು. ಉದಾಹರಣೆಗೆ, ರಾಜ್ಯಗಳಿಗೆ ಹಂಚಿಕೆ ಮಾಡುವ 100 ರೂಪಾಯಿಯಲ್ಲಿ ಮೊದಲು ಕರ್ನಾಟಕಕ್ಕೆ ₹4.71 ಸಿಗುತ್ತಿದ್ದರೆ, 15ನೇ ಆಯೋಗವು ಅದನ್ನು ₹3.64ಗೆ ಇಳಿಸಿತು. ಇದರಿಂದ ರಾಜ್ಯಕ್ಕೆ ನೇರವಾಗಿ ಸುಮಾರು ₹80 ಸಾವಿರ ಕೋಟಿಯಷ್ಟು ಬೃಹತ್ ಪ್ರಮಾಣದ ತೆರಿಗೆ ಪಾಲು ಸಿಗದೆ ಅನ್ಯಾಯವಾಯಿತು ಎಂದು ವಿವರ ಒದಗಿಸಿದರು.

ದೇಶದ ಆರ್ಥಿಕ ಶಕ್ತಿಯಲ್ಲಿ ಚಾಲಕ ಸ್ಥಾನದಲ್ಲಿರುವ ಕರ್ನಾಟಕ ತಲಾವಾರು ಆರ್ಥಿಕ ಉತ್ಪಾದಕತೆಯಲ್ಲಿ ಮೊದಲ ಸ್ಥಾನದಲ್ಲಿದೆ. ತೆರಿಗೆ, ಸೆಸ್‌ ಮುಂತಾದ ರೂಪದಲ್ಲಿ ಕೇಂದ್ರ ಸರ್ಕಾರವು ಕರ್ನಾಟಕದಿಂದ ₹4.5 ಲಕ್ಷ ಕೋಟಿಯಿಂದ ₹5 ಲಕ್ಷ ಕೋಟಿಗಳಷ್ಟು ಸಂಗ್ರಹಿಸುತ್ತದೆ. ರಾಜ್ಯದ ಒಟ್ಟಾರೆ ಆಯವ್ಯಯದಲ್ಲಿ ಇಡೀ ದೇಶದಲ್ಲಿಯೇ ಕೇಂದ್ರದಿಂದ ಅತ್ಯಂತ ಕಡಿಮೆ ತೆರಿಗೆ ಪಾಲು ಮತ್ತು ಅನುದಾನ ಪಡೆಯುವ ರಾಜ್ಯವೂ ಕರ್ನಾಟಕವೇ ಆಗಿರುವುದು ದುರದೃಷ್ಟಕರ. ಈ ಹಿನ್ನೆಲೆಯಲ್ಲಿ ನಮಗೆ 14ನೇ ಹಣಕಾಸು ಆಯೋಗವು ನೀಡಿದ್ದ ಶೇ 4.71ರಷ್ಟು ಪಾಲನ್ನು ಕೊಟ್ಟರೆ ಮಾತ್ರ ನಾವು ನಿಟ್ಟುಸಿರು ಬಿಡುವಂತಾಗುತ್ತದೆ. ಅದಕ್ಕಿಂತ ಹೆಚ್ಚು ಕೊಟ್ಟರೆ ಮಾತ್ರ ನೈಜವಾಗಿ ನ್ಯಾಯ ಸಿಕ್ಕಂತಾಗುತ್ತದೆ ಎನ್ನುವುದು ಕರ್ನಾಟಕದ ಒತ್ತಾಯ ಎಂದು ಸಿಎಂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.


Share this with Friends

Related Post