ಬೆಂಗಳೂರು: ನಮ್ಮ ಸರ್ಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿ ಮಾಡಿರುವ ಫೋನ್ ಟ್ಯಾಪಿಂಗ್ ಆರೋಪ ನಿರಾಧಾರವಾದ್ದು,ರಾಜ್ಯಪಾಲರು ಮಾತ್ರವಲ್ಲ ಯಾರ ದೂರವಾಣಿಯನ್ನೂ ಕದ್ದಾಲಿಕೆ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಬಿಜೆಪಿ ನಾಯಕರಿಂದ ಕೇಳಿಬಂದ ಫೋನ್ ಟ್ಯಾಪಿಂಗ್ ಆರೋಪಕ್ಕೆ ಸದನಕ್ಕೆ ಉತ್ತರಿಸಿದ ಸಿಎಂ,ಕೇಂದ್ರದ ಹೈಕಮಾಂಡ್ ನಿಂದ ರಾಜ್ಯಪಾಲರಿಗೆ ಫೋನ್ ಬಂದಿರಬಹುದು ಎಂದು ನಮ್ಮ ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಅವರು ಊಹೆ ಮೇಲೆ ತಿಳಿಸಿದ್ದಾರೆ ಅಷ್ಟೆ. ನಮ್ಮ ಸರ್ಕಾರ ಯಾರ ಪೋನ್ ಅನ್ನು ಟ್ಯಾಪ್ ಮಾಡುವುದಿಲ್ಲ ವಿರೋಧ ಪಕ್ಷದವರಿಗೆ ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಲು ಇಷ್ಟವಿಲ್ಲ. ಆದ ಕಾರಣ ಸುಮ್ಮನೆ ಇಲ್ಲಸಲ್ಲದ ವಿಷಯಗಳನ್ನು ಪ್ರಸ್ತಾಪ ಮಾಡಿ ಕಾಲಹರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿದರು.
ಇಂದು ಮಧ್ಯಾಹ್ನ ಪ್ರಾರಂಭವಾದ ವಿಧಾನಸಭೆ ಕಲಾಪದಲ್ಲಿ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ , ಉಪ ನಾಯಕರಾದ ಅರವಿಂದ್ ಬೆಲ್ಲದ್ ಹಾಗೂ ಸುರೇಶ್ ಕುಮಾರ್ ಅವರು ರಾಜ್ಯಪಾಲರ ಹುದ್ದೆಗೆ ಎಲ್ಲರೂ ಗೌರವ ನೀಡಬೇಕು. ಆದರೆ ಸದನದಲ್ಲಿ ರಾಜ್ಯಪಾಲರನ್ನು ಅಗೌರವದಿಂದ ನಡೆಸಿಕೊಳ್ಳಲಾಗಿದೆ. ಹಾಗೂ ಹೆಚ್.ಕೆ.ಪಾಟೀಲ್ ಅವರು ರಾಜ್ಯಪಾಲರಿಗೆ ಕೇಂದ್ರದ ಗೃಹ ಸಚಿವರು ಫೋನ್ ಮಾಡಿದ್ದರು ಎಂದು ಹೇಳಿದ್ದಾರೆ. ಹಾಗಾಗಿ ಸರ್ಕಾರ ರಾಜ್ಯಪಾಲರ ಫೋನ್ ಟ್ಯಾಪಿಂಗ್ ಮಾಡಿಸುತ್ತಿದೆಯೇ ಅಥವಾ ಕೇಂದ್ರ ಗೃಹ ಸಚಿವರು ಫೋನ್ ಮಾಡಿದ್ದರು ಎಂಬುದಕ್ಕೆ ಮಾಹಿತಿ ನೀಡಬೇಕು. ಮಾಹಿತಿ ನೀಡದಿದ್ದರೆ ನಿಮ್ಮ ಹೇಳಿಕೆಯನ್ನು ಹಿಂಪಡೆದು, ಸದನಕ್ಕೆ ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಈ ರೀತಿ ಸ್ಪಷ್ಟೀಕರಣ ನೀಡುವ ಜತೆಗೆ ತನಿಖೆ ಕುರಿತ ಬಿಜೆಪಿ ಬೇಡಿಕೆಯನ್ನು ತಳ್ಳಿಹಾಕಿದರು.
ರಾಜ್ಯಪಾಲರಿಗೆ ಅವಮಾನ ಮಾಡಲೆಂದು ಹೆಚ್.ಕೆ.ಪಾಟೀಲರು ಖುರ್ಚಿ ಮೇಲೆ ನಿಂತಿದ್ದಲ್ಲ. ರಾಜ್ಯಪಾಲರು ಬೇಗನೆ ಹೊರಟ ಸಂದರ್ಭದಲ್ಲೂ ಕೂಡ ಉಪಮುಖ್ಯಮಂತ್ರಿಗಳು, ಸಭಾಪತಿಗಳು, ಪಾಟೀಲರು ಮತ್ತು ನಾನು ಅವರ ಹಿಂದೆಯೇ ಹೋಗಿ ಅವರನ್ನು ಗೌರವದಿಂದ ಬೀಳ್ಕೊಟ್ಟಿದ್ದೇವೆ ಎಂದರು.
ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷಗಳ ನಡುವೆ ರಾಜ್ಯಪಾಲರ ನಡವಳಿಕೆ ಬಗ್ಗೆ ವಾದವಿವಾದ ನಡೆಯುತ್ತಲೇ ಇದ್ದುದರಿಂದ ಸಭೆಯನ್ನು 10 ನಿಮಿಷಗಳ ಕಾಲ ಮುಂದೂಡಿದ ಸಭಾಧ್ಯಕ್ಷರು ಆಡಳಿತ ಮತ್ತು ವಿರೋಧ ಪಕ್ಷದವರೊಂದಿಗೆ ಸಭೆಯನ್ನು ನಡೆಸಿದ ನಂತರ ಸದನಯನ್ನು ಆರಂಭಿಸಿದ ವೇಳೆ ರಾಜ್ಯಪಾಲರ ನಡವಳಿಕೆ ಬಗ್ಗೆ ಹೀಗೆ ವಾದ ವಿವಾದ ಮಾಡುವುದು ಸದನದ ಘನತೆಗೆ ತಕ್ಕುದಲ್ಲ. ಇದರಿಂದ ಸಾರ್ವಜನಿಕರಿಗೆ ತಪ್ಪು ಸಂದೇಶ ಹೋಗುತ್ತದೆ. ಸದನದ ಸದಸ್ಯರು ತಮ್ಮ ಘನತೆ ತಕ್ಕಂತೆ ಆತ್ಮ ವಿಮರ್ಶೆ ಮಾಡಿಕೊಂಡು ಸದನದಲ್ಲಿ ಗೌರವಯುತವಾಗಿ ನಡೆದುಕೊಳ್ಳಬೇಕು. ಆದ್ದರಿಂದ ಇನ್ನು ಮುಂದೆ ಯಾವ ಸದಸ್ಯರು ರಾಜ್ಯಪಾಲರ ಬಗ್ಗೆ ಮತ್ತು ಅವರ ನಡವಳಿಕೆ ಬಗ್ಗೆ ಮಾತನಾಡಬಾರದೆಂದು ರೂಲಿಂಗ್ ನೀಡಿದರು. ನಂತರ ಕಲಾಪದಲ್ಲಿ ಗಮನ ಸೆಳೆಯುವ ಸೂಚನೆಯನ್ನು ನಡೆಸಿದ ನಂತರ ವಿಧಾನಸಭಾ ಕಲಾಪವನ್ನು ನಾಳೆ ಬೆಳಿಗ್ಗೆ 9 ಗಂಟೆಗೆ ಸಭಾಧ್ಯಕ್ಷರು ಮುಂದೂಡಿದರು.

